ಜಲಂಧರ್: ಪಂಜಾಬ್‌ನ ಮನೆಗಳ ಮೇಲೆ ವಿಮಾನದ ಆಕಾರದ ನೀರಿನ ಟ್ಯಾಂಕ್‌ಗಳಿರುವುದು ಹೊಸದೇನಲ್ಲ. ಆದರೆ, ಈಗ ಜಲಂಧರ್‌ನ ಕಿಶನ್‌ಪುರ ಪ್ರದೇಶದ ಮನೆಯೊಂದರ ಮೇಲೆ ಅಮೆರಿಕದ ಹೆಮ್ಮೆಯ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ (Statue of Liberty) ಪ್ರತ್ಯಕ್ಷವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನ್ಯೂಯಾರ್ಕ್‌ನಲ್ಲಿರುವ ಈ ಜಾಗತಿಕ ಸ್ಮಾರಕದಂತೆಯೇ ಕಾಣುವ 15 ಅಡಿ ಎತ್ತರದ ಪ್ರತಿಕೃತಿಯನ್ನು ವ್ಯಕ್ತಿಯೊಬ್ಬರು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ನಿರ್ಮಿಸಿದ್ದಾರೆ.
ಯಾರು ಈ ಸಾಹಸಿ? ಈ ವಿಶಿಷ್ಟ ಕಲಾಕೃತಿಯನ್ನು ನಿರ್ಮಿಸಿದವರು ಅನಿವಾಸಿ ಭಾರತೀಯ ಉದ್ಯಮಿ ಗುರ್ಜಿತ್ ಸಿಂಗ್ ಮಥಾರು. ಕಳೆದ ಎರಡು ದಶಕಗಳಿಂದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಗುರ್ಜಿತ್ ಅವರಿಗೆ ಆ ನಗರದ ನೆನಪಿಗಾಗಿ ಏನಾದರೂ ವಿಶೇಷವಾಗಿ ಮಾಡಬೇಕು ಎಂಬ ಆಸೆಯಿತ್ತು. ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ, 25 ದಿನಗಳ ಸತತ ಪರಿಶ್ರಮದಿಂದ ಈ ಮಿನಿ ಸ್ಟ್ಯಾಚ್ಯೂ ಆಫ್ ಲಿಬರ್ಟಿಯನ್ನು ಅವರು ಸಿದ್ಧಪಡಿಸಿದ್ದಾರೆ. “ನ್ಯೂಯಾರ್ಕ್‌ನಲ್ಲಿ ಪ್ರತಿ ದಿನವೂ ಈ ಸ್ಮಾರಕವನ್ನು ನೋಡುತ್ತಿದ್ದೆ, ಭಾರತಕ್ಕೆ ಬಂದಾಗಲೂ ಆ ನಗರದ ನೆನಪು ಹಸಿರಾಗಿರಲಿ ಎಂಬ ಕಾರಣಕ್ಕೆ ಇದನ್ನು ನಿರ್ಮಿಸಿದೆ” ಎಂದು ಅವರು ತಿಳಿಸಿದ್ದಾರೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ: ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
- “ಇದು ಸ್ವಲ್ಪ ಜಾಸ್ತಿ ಆಗಿಲ್ವಾ?” (Yeh kuch zyada nahi ho gaya?) ಎಂದು ಒಬ್ಬರು ಪ್ರಶ್ನಿಸಿದರೆ, “ಪಂಜಾಬ್‌ನ ದೋಬಾ ಭಾಗದ ಹಳ್ಳಿಗಳಲ್ಲಿ ಸಂಚರಿಸಿದರೆ ಇಂತಹ ನೂರಾರು ವಿಚಿತ್ರ ಪ್ರತಿಮೆಗಳನ್ನು ನೀವು ಕಾಣಬಹುದು” ಎಂದು ಮತ್ತೊಬ್ಬರು ತಿಳಿಸಿದ್ದಾರೆ.
- ಇನ್ನು ಕೆಲವರು ಟೀಕೆ ಮಾಡಿದ್ದು, “ಅಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆ ನಿರ್ಮಿಸಬಹುದಿತ್ತು, ಆದರೆ ಬ್ರಿಟಿಷ್ ಗುಲಾಮಿ ಮಾನಸಿಕತೆ ಇನ್ನೂ ಹೋಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಮತ್ತೊಬ್ಬರು ತಮಾಷೆಯಾಗಿ “ಇದು ಸ್ಟ್ಯಾಚ್ಯೂ ಆಫ್ ಲಿಬರ್ಟಿ ಅಲ್ಲ, ಲಿಬರ್ಟಿ ಶೂಸ್ ಪ್ರತಿಮೆ ಇರಬೇಕು” ಎಂದು ಕಾಲೆಳೆದಿದ್ದಾರೆ.
ಟೀಕೆಗಳೇನೇ ಇರಲಿ, ಗುರ್ಜಿತ್ ಅವರ ಮನೆ ಈಗ ಪ್ರವಾಸಿ ತಾಣವಾಗಿ ಬದಲಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಈ ‘ದೇಶಿ ಅಮೆರಿಕ’ವನ್ನು ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

