HomeKarnatakaಈ ಬಾರಿ ಅದ್ಧೂರಿಯಾಗಿ 'ತುಮಕೂರು ದಸರಾ': ಡಿಸಿಎಂ ಪರಮೇಶ್ವರ್ ರಿಂದ ಲಾಂಛನ ಅನಾವರಣ

ಈ ಬಾರಿ ಅದ್ಧೂರಿಯಾಗಿ ‘ತುಮಕೂರು ದಸರಾ’: ಡಿಸಿಎಂ ಪರಮೇಶ್ವರ್ ರಿಂದ ಲಾಂಛನ ಅನಾವರಣ

ತುಮಕೂರು: ಈ ಬಾರಿಯ ತುಮಕೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ವಸ್ತುಪ್ರದರ್ಶನದಲ್ಲಿ ಎಐ, ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಅವಕಾಶ ಕಲ್ಪಿಸಲಾಗುವುದು. ಸುಮಾರು 2,000ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಇಂದು ತುಮಕೂರು ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ‌ ಕಾರ್ಯಕ್ರಮದಲ್ಲಿ ʼತುಮಕೂರು ದಸರಾ ಉತ್ಸವ 2026ʼರ ಲಾಂಛನವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಮಹಾನವಮಿ ಹಬ್ಬ ನಮ್ಮ‌ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸುತ್ತದೆ. ತುಮಕೂರು ದಸರಾ ಉತ್ಸವ ಜಿಲ್ಲೆಯ ಸಂಸ್ಕೃತಿ, ನಾಗರೀಕತೆ, ಪರಂಪರೆ, ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಎಲ್ಲರೂ ಭಾಗವಹಿಸಬೇಕು. ತುಮಕೂರಿಗೆ ಕೀರ್ತಿ ತರುವ ರೀತಿಯಲ್ಲಿ ದಸರಾ ಉತ್ಸವ ಆಚರಿಸೋಣ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ತುಮಕೂರು ದಸರಾ ಉತ್ಸವ 2026’ ಕಾರ್ಯಕ್ರಮವು ಅಕ್ಟೋಬರ್ 11 ರಿಂದ ಅಕ್ಟೋಬರ್ 21ರವರೆಗೆ ನಡೆಯಲಿದೆ. ಈ ವರ್ಷದ ತುಮಕೂರು ದಸರಾ ಉತ್ಸವದ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಬಿಡುವು ಮಾಡಿಕೊಂಡು ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಎರಡು ವರ್ಷದ ಹಿಂದೆ ನಮಗೆ ಬಂದ‌ ‘ತುಮಕೂರು ದಸರಾ ಉತ್ಸವ’ ಪರಿಕಲ್ಪನೆಯು ಇಂದು ಮೈಸೂರು ದಸರಾದಂತೆ ಜನಾಕರ್ಷಿಸುತ್ತಿದೆ. ಜಿಲ್ಲೆಯಲ್ಲಿ ವಿಭಿನ್ನವಾದ ಭಾವನೆಗಳು ಬರದಂತೆ, ಜಾತಿ-ಧರ್ಮ‌ವನ್ನು ಮೀರಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಕಳೆದ ವರ್ಷ ತುಮಕೂರು ದಸರಾ ಬಹಳ ಯಶಸ್ವಿಯಾಗಿ ನಡೆಯಿತು. ದೇವಸ್ಥಾನದ ಪ್ರತಿಕೃತಿಯು ಮೂಲ ದೇವಸ್ಥಾನದಂತೆ ಗೋಚರಿಸುತ್ತಿತ್ತು. ಹತ್ತು ದಿನ ನಡೆದ ನವದುರ್ಗೆಯರ ಪೂಜೆ, ಹೋಮ-ಹವನಗಳು, ಕವಿಗೋಷ್ಠಿ, ಯುವ ದಸರಾ, ಮಹಿಳಾ ದಸರಾ, ವೈಜ್ಞಾನಿಕ ವಸ್ತುಪ್ರದರ್ಶನ ತುಮಕೂರು ದಸರಾ ಯಶಸ್ಸಿಗೆ ಕಾರಣವಾಯಿತು ಎಂದರು.

ಇಸ್ರೋದವರು ರಾಕೆಟ್ ಯಾವ ರೀತಿ ತಯಾರಿಸುತ್ತಾರೆ ಎಂಬುದರ ಕುರಿತು ವೈಜ್ಞಾನಿಕ‌ ಮತ್ತು ತಾಂತ್ರಿಕ ವಸ್ತುಪ್ರದರ್ಶನ ನಡೆಸಲಾಯಿತು. ಶಾಲಾ ಮಕ್ಕಳ ಕಲಿಕೆಗೆ ಹೆಚ್ಚು ಅನುಕೂಲವಾಯಿತು. ‘ಪ್ರಚಂಡ’ ಎಂಬ ಯುದ್ಧ ಹೆಲಿಕ್ಯಾಪ್ಟರ್ ಪ್ರದರ್ಶನಕ್ಕೆ ಇಡಲಾಗಿತ್ತು. ಹೆಲಿ ರೈಡ್ ಆಯೋಜನೆಯನ್ನು ಜನರು ಸಂಭ್ರಮಿಸಿದರು. ಅಳ್ವಾಸ್‌ನ 150 ಕಲಾವಿದರ ತಂಡವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಎಲ್ಲರನ್ನು ಒಳಗೊಂಡಂತೆ ದಸರಾ ಆಚರಿಸುವ ಪ್ರಯತ್ನ‌ ಮಾಡಲಾಯಿತು ಎಂದು ಹೇಳಿದ್ದಾರೆ.

ಮೈಸೂರಿನಂತೆ ದಸರಾವನ್ನು ತುಮಕೂರಿನಲ್ಲಿ ಆಚರಿಸಲಾಗುತ್ತಿದೆ‌ ಎಂಬ‌ ಮಾತುಗಳು ಎಲ್ಲೆಡೆಯಿಂದ ಕೇಳಿಬಂದವು. ಎಲ್ಲ ರೀತಿಯ ಜನರು, ಜನಪ್ರತಿನಿಧಿಗಳು, ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡರು. ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅನುದಾನ ಬಿಡುಗಡೆ ಮಾಡಿ ಸಹಕರಿಸಿದರು ಎಂದರು.

ಲಾಂಛನ ಬಿಡುಗಡೆ ವೇಳೆ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಬಿ.ವಿ.ಅಶ್ವಿಜಾ,‌ ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್‌ ಕೆ.ವಿ ಅವರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular