ತುಮಕೂರು: ರಾಜ್ಯದಲ್ಲಿ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಣ ಬಿಸಿಲಿನಿಂದಾಗಿ ಜನರ ಬದುಕು ಹೈರಾಣಾಗಿದೆ. ತಾಪಮಾನದ ಏರಿಕೆಯಿಂದಾಗಿ ಬಿಸಿ ಗಾಳಿ ಬೀಸುತ್ತಿದ್ದು, ಮನುಷ್ಯರು ಮಾತ್ರವಲ್ಲ ಪ್ರಾಣಿಗಳಲ್ಲಿಯೂ ಹೀಟ್ ಸ್ಟ್ರೋಕ್ ನಂತಹ ಸಮಸ್ಯೆ ಕಾಡುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಹೀಟ್ ಸ್ಟ್ರೋಕ್ ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ನಡುವೆ ವನ್ಯಜೀವಿಗಳು ಕೂಡ ಬಿಸಿಲ ಹೊಡೆತಕ್ಕೆ ತತ್ತರಿಸುತ್ತಿವೆ. ಆಹಾರ, ನೀರಿಗಾಗಿ ಹಾತೊರೆಯುವಂತಾಗಿದೆ. ಈ ನಡುವೆ ತುಮಕೂರು ಜಿಲ್ಲೆಯಲ್ಲಿ 32 ನವಿಲುಗಳು ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಹಲವೆಡೆಗಳಲ್ಲಿ ಒಟ್ಟು 32 ನವಿಲುಗಳು ಮೃತಪಟ್ಟಿದ್ದು, ಹೀಟ್ ಸ್ಟ್ರೋಕ್‌ನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ, ಹುಲ್ಲೆನಹಳ್ಳಿ ಗ್ರಾಮದಲ್ಲಿ ಏ.16ರಿಂದ 21ರವರೆಗೆ ಒಟ್ಟು 32 ನವಿಲುಗಳ ಸಾವನ್ನಪ್ಪಿವೆ. ಉಷ್ಣಾಘಾತದಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ.
ಸದ್ಯ ಮೃತ ನವಿಲುಗಳ ಮರಣೋತ್ತರ ಪರೀಕ್ಷೆಗಾಗಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿಯಲಿದೆ.

