ಇಂದು ( ಏಪ್ರಿಲ್ 23 ) ತಮಿಳುನಾಡಿನ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ದೇಶದ ವಿವಿಧ ನಗರಗಳಲ್ಲಿ ನೆಲೆಸಿರುವ ಮೂಲ ತಮಿಳುನಾಡಿನವರು ನಿನ್ನೆಯೇ ಮತ ಚಲಾಯಿಸುವ ಸಲುವಾಗಿ ತಮ್ಮ ತಮ್ಮ ಊರುಗಳಿಗೆ ವಾಪಸ್ಸಾಗಿದ್ದಾರೆ.
ಇನ್ನು ಇಷ್ಟು ವರ್ಷಗಳ ಚುನಾವಣೆಗಿಂತ ಈ ಬಾರಿಯ ತಮಿಳುನಾಡು ಚುನಾವಣೆ ತುಸು ಭಿನ್ನ ಎನಿಸಿಕೊಂಡಿದೆ. ಇದಕ್ಕೆ ಕಾರಣ ನಟ ದಳಪತಿ ವಿಜಯ್. ಹೌದು, ವಿಜಯ್ ಟಿವಿಕೆ ಪಕ್ಷ ರಚನೆ ಮಾಡಿ ಆಡಳಿತಾರೂಢ ಡಿಎಂಕೆ ವಿರುದ್ಧ ತೊಡೆ ತಟ್ಟಿದ್ದು, ಫಲಿತಾಂಶದ ಕುರಿತು ಕುತೂಹಲ ಮೂಡಿಸಿದೆ.
ವಿಜಯ್ ತಮ್ಮ ಚುನಾವಣಾ ಪ್ರಚಾರದಲ್ಲಿ ಹೋದಲ್ಲೆಲ್ಲ ಡಿಎಂಕೆ ಪಕ್ಷವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳು ವೈರಲ್ ಆದ ಆಗಿ ಚುನಾಣೆಯಲ್ಲಿ ಟಿವಿಕೆ ಡಿಎಂಕೆಗೆ ಪೈಪೋಟಿ ನೀಡಲಿದೆಯಾ ಎಂಬ ಪ್ರಶ್ನೆಗಳು ಎದ್ದಿದ್ದವು.
ಇಷ್ಟರ ಮಟ್ಟಿಗೆ ಕುತೂಹಲ ಹುಟ್ಟುಹಾಕಿರುವ ತಮಿಳುನಾಡು ಚುನಾವಣೆಯಲ್ಲಿ ಕಲಾವಿದರು ಮತದಾನ ಮಾಡಿದ್ದು, ಬಳಿಕ ಮಾಧ್ಯಮದವರ ಜತೆ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುವಂತೆ ಮನವಿ ಮಾಡಿದ್ದಾರೆ.
ಹಾಸ್ಯ ಕಲಾವಿದ ವಿಟಿವಿ ಗಣೇಶ್ ಮತದಾನದ ಬಳಿಕ ಮಾತನಾಡಿದ್ದು, ‘ನಾನು ನನ್ನ ಮತವನ್ನು ಟಿವಿಕೆಗೆ ಹಾಕಿದ್ದೇನೆ. ಸಮಾಜ, ಜನ ಹಾಗೂ ವ್ಯವಸ್ಥೆಯನ್ನು ಇನ್ನೂ ಉನ್ನತ ಸ್ಥಾನಕ್ಕೆ ಏರಿಸಲು ವಿಜಯ್ ಸರಿಯಾದ ವ್ಯಕ್ತಿ. ನಾನು ಬೇರೆ ಪಕ್ಷದ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ನನಗೆ ಟಿವಿಕೆ ಗೆಲ್ಲಬೇಕು, ವಿಜಯ್ ದಳಪತಿ ಮುಖ್ಯಮಂತ್ರಿಯಾಗಬೇಕು. ಡೌಟೇ ಬೇಡ ವಿಜಯ್ ಸಿಎಂ ಆಗ್ತಾರೆ, ಮೇ 4 ರಂದು ಟಿವಿಕೆ ಸರ್ಕಾರವನ್ನು ರಚಿಸುತ್ತೆ, ಕಾದು ನೋಡಿ’ ಎಂದು ತಿಳಿಸಿದರು.
ಹೀಗೆ ಮತಗಟ್ಟೆಯ ಮುಂದೆಯೇ ನಟ ವಿಟಿವಿ ಗಣೇಶ್ ಅತಿಯಾದ ವಿಶ್ವಾಸದಲ್ಲಿ ಟಿವಿಕೆ ಬಲಿಷ್ಠ ಡಿಎಂಕೆಯನ್ನು ಮಣಿಸಿ ಸರ್ಕಾರ ರಚಿಸಲದೆ ಎಂದು ಹೇಳಿರುವುದು ಚರ್ಚೆಯನ್ನು ಹುಟ್ಟುಹಾಕಿದೆ.

