HomeIndiaಸ್ವಾತಂತ್ರ್ಯ ದಿನದಂದು ಸಿಎಂ ವಿಜಯ್–ತ್ರಿಷಾ ನಡೆಗೆ ಕಿಡಿ ; ‘ನಾಚಿಕೆಗೇಡಿನ ದೃಶ್ಯ’ ಎಂದ ಡಿಎಂಕೆ ಮುಖವಾಣಿ...

ಸ್ವಾತಂತ್ರ್ಯ ದಿನದಂದು ಸಿಎಂ ವಿಜಯ್–ತ್ರಿಷಾ ನಡೆಗೆ ಕಿಡಿ ; ‘ನಾಚಿಕೆಗೇಡಿನ ದೃಶ್ಯ’ ಎಂದ ಡಿಎಂಕೆ ಮುಖವಾಣಿ |WATCH VIDEO

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಆಪ್ತ ಸ್ನೇಹಿತೆ, ನಟಿ ತ್ರಿಷಾ ಕುರಿತಾಗಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ದ್ವಂದ್ವಾರ್ಥದ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ ಬೆನ್ನಲ್ಲೇ, ಪಕ್ಷದ ಮುಖವಾಣಿ ಮುರಸೋಲಿ ಇದೀಗ ವಿಜಯ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದೆ. ಅಧಿಕೃತ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿಷಾ ಭಾಗವಹಿಸಿದ್ದ ವಿಚಾರವನ್ನು ಪತ್ರಿಕೆ ಟೀಕಿಸಿದೆ ಎನ್ನಲಾಗಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ.

ಮುರಸೋಲಿಯ ಸಂಪಾದಕೀಯದಲ್ಲಿ ವಿಜಯ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಶನಿವಾರ ಫೋರ್ಟ್ ಸೇಂಟ್ ಜಾರ್ಜ್ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿಯೊಬ್ಬರನ್ನು ಮೊದಲ ಸಾಲಿನಲ್ಲಿ ಕೂರಿಸಿ, ಅವರೊಂದಿಗೆ ಪರಸ್ಪರ ಸೆಲ್ಯೂಟ್ ಮಾಡಿರುವುದು ಶಿಷ್ಟಾಚಾರಕ್ಕೆ ವಿರುದ್ಧವಾದ “ನಾಚಿಕೆಗೇಡಿನ ದೃಶ್ಯ” ಎಂದು ಟೀಕಿಸಿದೆ.

ವಿಜಯ್ ಅವರ ಘನತೆ ಗಾಳಿಯಲ್ಲಿ ಹಾರಿ ಹೋಯಿತು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಸ್ವಾತಂತ್ರ್ಯ ದಿನದಂದು ಮುಖ್ಯಮಂತ್ರಿ ವಿಜಯ್ ಅವರ ಘನತೆ ಗಾಳಿಯಲ್ಲಿ ಹಾರಿ ಹೋಯಿತು. ಯಾವುದೇ ನಾಚಿಕೆ ಅಥವಾ ಹಿಂಜರಿಕೆಯಿಲ್ಲದೆ ನಟಿಯೊಬ್ಬರನ್ನು ಮೊದಲ ಸಾಲಿನಲ್ಲಿ ಕೂರಿಸಿ, ಪದೇಪದೇ ಪರಸ್ಪರ ಸೆಲ್ಯೂಟ್ ಮಾಡಿದರು. ಈ ದೃಶ್ಯವನ್ನು ಅವರಿಗೆ ಮತ ಹಾಕಿದವರಿಗೂ ಸಹ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ಮುರಸೋಲಿ ತನ್ನ ಸಂಪಾದಕೀಯದಲ್ಲಿ ಹೇಳಿದೆ.

ತಮಿಳುನಾಡು ಸರ್ಕಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿಷಾ ಅವರು ವಿಜಯ್ ಅವರ ಪೋಷಕರ ಪಕ್ಕದಲ್ಲೇ ಮೊದಲ ಸಾಲಿನಲ್ಲಿ ಕುಳಿತಿದ್ದರು. ಹಳದಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಅವರು, ವಿಜಯ್ ರಾಷ್ಟ್ರಧ್ವಜಾರೋಹಣ ಮಾಡುವಾಗ ಹಾಗೂ ಗೌರವ ವಂದನೆ ಸ್ವೀಕರಿಸುವ ಸಂದರ್ಭದಲ್ಲಿ ಅವರಿಗೆ ಸೆಲ್ಯೂಟ್ ಮಾಡುತ್ತಿರುವುದು ಕಂಡುಬಂದಿತ್ತು.

ಅಧಿಕೃತ ಕಾರ್ಯಕ್ರಮಗಳಲ್ಲಿ ತ್ರಿಷಾ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಮುನ್ನ ಮೇ ತಿಂಗಳಲ್ಲಿ ನಡೆದ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿಯೂ ತ್ರಿಷಾ ಭಾಗವಹಿಸಿದ್ದರು. ಆಗ ಅವರು ಭಾವುಕರಾಗಿ ಕಾಣಿಸಿಕೊಂಡಿದ್ದರು.

ವಿಜಯ್ ಮತ್ತು ತ್ರಿಷಾ ಅವರ ಸ್ನೇಹ ಬಹುಕಾಲದಿಂದಲೂ ಊಹಾಪೋಹ ಮತ್ತು ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ವಿಜಯ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಸಂದರ್ಭದಲ್ಲಿ ಈ ವಿಚಾರ ಮತ್ತಷ್ಟು ಗಮನ ಸೆಳೆದಿದೆ.

ವಿಜಯ್ ಅವರ ಪತ್ನಿ ಸಂಗೀತಾ ಅವರು 2026ರ ಫೆಬ್ರವರಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮಾನಸಿಕ ಕ್ರೌರ್ಯ, ಭಾವನಾತ್ಮಕ ನಿರ್ಲಕ್ಷ್ಯ, ಆರೋಪಗಳನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಆದರೆ ಈ ತಿಂಗಳ ಆರಂಭದಲ್ಲಿ ಅವರು ವಿಚ್ಛೇದನ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿಎಂಕೆ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. “ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ವ್ಯಕ್ತಿಯೇ ಇಂತಹ ನಾಚಿಕೆಗೇಡಿನ ಹಾಗೂ ಅಸಹ್ಯಕರ ವರ್ತನೆಯನ್ನು ಬಹಿರಂಗವಾಗಿ ಪ್ರದರ್ಶಿಸುವ ಮೂಲಕ ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ” ಎಂದು ಮುರಸೋಲಿ ಟೀಕಿಸಿದೆ.

ಅಭಿಮಾನಿಗಳಿಗೂ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ನಟಿಯೊಬ್ಬರನ್ನು ಆಹ್ವಾನಿಸಿ, ಅವರಿಗೆ ಸೆಲ್ಯೂಟ್ ಮಾಡಿರುವುದನ್ನು ವಿಜಯ್ ಅವರ ಅಭಿಮಾನಿಗಳಿಗೂ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular