ಬೆಂಗಳೂರು: ವರ್ಗಾವಣೆಗೊಂಡ ಶಿಕ್ಷಕರಿಗೆ ಗಣತಿ ಕೆಲಸದಿಂದ ವಿನಾಯಿತಿ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 2024- 25 ನೇ ಸಾಲಿನಲ್ಲಿ ವರ್ಗಾವಣೆಯಾಗಿರುವ ಶಿಕ್ಷಕರನ್ನು ಯಾವುದೇ ರೀತಿಯ ಗಣತಿ ಕಾರ್ಯಗಳಿಗೆ ನಿಯೋಜಿಸದಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ವರ್ಗಾವಣೆಯಾದ ಶಿಕ್ಷಕರನ್ನು ಗಣತಿ ಕಾರ್ಯಗಳಿಗೆ ಬಳಸದಂತೆ ರಾಜ್ಯದ ಎಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. 2024- 25 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಮುಕ್ತಾಯವಾಗಿದೆ. ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ವರ್ಗಾವಣೆಯಾದ ಶಿಕ್ಷಕರು ಏಪ್ರಿಲ್ 9ರಂದು ಕರ್ತವ್ಯದಿಂದ ಬಿಡುಗಡೆ ಹೊಂದಬೇಕು. ಏಪ್ರಿಲ್ 10 ರಿಂದ ವರ್ಗಾವಣೆಗೊಂಡ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪ್ರಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿ ವರ್ಗಾವಣೆಯಾದ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಿದ ಬಗ್ಗೆ ಪರಿಶೀಲಿಸಬೇಕು. ವರ್ಗಾವಣೆಯಾದ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ಅಡಚಣೆ ಎದುರಾಗದಂತೆ ಕ್ರಮ ವಹಿಸಬೇಕೆಂದು ತಿಳಿಸಲಾಗಿದೆ.

