ಮೊಬೈಲ್ ಫೋನ್ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ ನಾವು ಪ್ರತಿದಿನ ಬಳಸುವ ಮೊಬೈಲ್ ನಂಬರ್‌ನಲ್ಲಿ 10 ಅಂಕೆಗಳೇ ಏಕೆ ಇರುತ್ತವೆ? ಎಂಬ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿಗೆ ಬಂದಿದೆಯೇ?
8 ಅಥವಾ 9 ಅಂಕೆಗಳ ಬದಲಿಗೆ 10 ಅಂಕೆಗಳನ್ನೇ ಏಕೆ ಆಯ್ಕೆ ಮಾಡಲಾಗಿದೆ ಎಂಬುದರ ಹಿಂದೆ ದೇಶದ ನಂಬರ್ ಅಗತ್ಯ ಮತ್ತು ಭವಿಷ್ಯದ ಬಳಕೆಯನ್ನು ಗಮನದಲ್ಲಿಟ್ಟುಕೊಂಡಿರುವ ಲೆಕ್ಕಾಚಾರವಿದೆ. ಭಾರತದ ರಾಷ್ಟ್ರೀಯ ನಂಬರಿಂಗ್ ಪ್ಲಾನ್‌ನಲ್ಲೂ ಮೊಬೈಲ್ ಸೇರಿದಂತೆ ಮೂಲಭೂತ ಸೇವೆಗಳಿಗೆ 10 ಅಂಕೆಗಳ ನಂಬರ್ ವ್ಯವಸ್ಥೆ ನಿಗದಿಪಡಿಸಲಾಗಿದೆ.
ಹೌದು. ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಇಲ್ಲದವರು ಬಹುತೇಕ ಯಾರೂ ಇಲ್ಲ. ಸಂವಹನ ಸೇರಿದಂತೆ ಹಲವು ಅಗತ್ಯಗಳಿಗಾಗಿ ಪ್ರತಿಯೊಬ್ಬರೂ ಮೊಬೈಲ್ ಫೋನ್ ಬಳಸುತ್ತಾರೆ. ಮೊಬೈಲ್ ಹೊಂದಿರುವ ಪ್ರತಿಯೊಬ್ಬರ ಬಳಿಯೂ ಸಿಮ್ ಕಾರ್ಡ್ ಇರುತ್ತದೆ. ಭಾರತದಲ್ಲಿ ಮೊಬೈಲ್ ನಂಬರ್ ಗಮನಿಸಿದರೆ ಅದು ಕೇವಲ 10 ಅಂಕಿಗಳನ್ನು ಹೊಂದಿರುತ್ತದೆ. ಹಾಗಾದರೆ 10 ಅಂಕೆಗಳೇ ಏಕೆ? 8 ಅಥವಾ 9 ಅಂಕೆಗಳು ಏಕೆ ಇರಬಾರದು? ಎಂಬ ಪ್ರಶ್ನೆ ಹಲವರಲ್ಲಿದೆ. ಮೊಬೈಲ್ ನಂಬರ್ 10 ಅಂಕೆಗಳನ್ನು ಹೊಂದಿರುವುದರ ಹಿಂದೆ ಹಲವು ಲೆಕ್ಕಾಚಾರಗಳಿವೆ. ದೇಶದ ಅಗತ್ಯಗಳು ಹಾಗೂ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರ ಕೈಗೊಳ್ಳಲಾಗಿದೆ.
10 ಅಂಕಿಗಳ ಹಿಂದಿರುವ ಅಸಲಿ ಕಾರಣ
ಭಾರತದ ಜನಸಂಖ್ಯೆ 140 ಕೋಟಿಗೂ ಹೆಚ್ಚಿದೆ. ಅಲ್ಲದೆ, ಹಲವರು ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸುತ್ತಾರೆ. ಒಂದು ವೇಳೆ 9 ಅಂಕೆಗಳ ನಂಬರ್ ವ್ಯವಸ್ಥೆ ಇದ್ದರೆ ಗರಿಷ್ಠ 100 ಕೋಟಿ ನಂಬರ್‌ಗಳನ್ನು ಮಾತ್ರ ನೀಡಲು ಸಾಧ್ಯವಾಗುತ್ತಿತ್ತು. ಇದು ದೇಶದ ಜನಸಂಖ್ಯೆಗೆ ಹೋಲಿಸಿದರೆ ಸಾಕಾಗುವುದಿಲ್ಲ.
ಅದೇ 10 ಅಂಕೆಗಳ ನಂಬರ್ ವ್ಯವಸ್ಥೆ ಇದ್ದರೆ 1,000 ಕೋಟಿ ವಿಭಿನ್ನ ನಂಬರ್ ಕಾಂಬಿನೇಷನ್‌ಗಳನ್ನು ನೀಡಲು ಸಾಧ್ಯವಾಗುತ್ತದೆ. ಹೀಗಾಗಿ ದೇಶದ ಜನಸಂಖ್ಯೆ ಹಾಗೂ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು 10 ಅಂಕೆಗಳ ನಂಬರ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇನ್ನು 11 ಅಂಕೆಗಳ ನಂಬರ್ ವ್ಯವಸ್ಥೆ ಜಾರಿಗೆ ತಂದರೆ 10,000 ಕೋಟಿ ನಂಬರ್‌ಗಳನ್ನು ರಚಿಸಬಹುದು. ಆದರೆ ಸದ್ಯಕ್ಕೆ ಅಷ್ಟು ದೊಡ್ಡ ಸಂಖ್ಯೆಯ ನಂಬರ್‌ಗಳ ಅಗತ್ಯವಿಲ್ಲ ಎಂಬ ಕಾರಣಕ್ಕೆ 10 ಅಂಕೆಗಳ ನಂಬರ್ ವ್ಯವಸ್ಥೆಯನ್ನೇ ಮುಂದುವರಿಸಲಾಗಿದೆ. ಇದರ ಹಿಂದಿರುವ ಅಸಲಿ ಕಾರಣ ಇದೇ ಎನ್ನಬಹುದು.
10 ಅಂಕಿಗಳ ಮೊಬೈಲ್ ನಂಬರ್ ಅನ್ನು ಯಾರು ನಿರ್ಧರಿಸಿದರು?
ಭಾರತದಲ್ಲಿ ಮೊಬೈಲ್ ನಂಬರ್‌ಗಳ ನಂಬರ್ ವ್ಯವಸ್ಥೆಯನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ನಿರ್ಧರಿಸಿದೆ. ನ್ಯಾಷನಲ್ ನಂಬರಿಂಗ್ ಪ್ಲಾನ್ 2003 ಅಡಿಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಟೆಲಿಕಾಂ ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ TRAI ಪ್ರಮುಖ ಪಾತ್ರ ವಹಿಸುತ್ತದೆ.
ಹಿಂದೆ ಲ್ಯಾಂಡ್‌ಲೈನ್ ನಂಬರ್‌ಗಳು 6 ಅಥವಾ 7 ಅಂಕೆಗಳನ್ನು ಹೊಂದಿದ್ದವು. ಆದರೆ 2000ರ ನಂತರ ದೇಶದಲ್ಲಿ ಮೊಬೈಲ್ ಬಳಕೆ ವೇಗವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಹಳೆಯ ವ್ಯವಸ್ಥೆಯನ್ನು ಬದಲಾಯಿಸಲಾಯಿತು. 6 ಅಥವಾ 7 ಅಂಕೆಗಳ ನಂಬರ್‌ಗಳಿಂದ ಹೆಚ್ಚಿನ ಸಂಖ್ಯೆಯ ವಿಭಿನ್ನ ನಂಬರ್‌ಗಳನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ 10 ಅಂಕೆಗಳ ನಂಬರ್ ವ್ಯವಸ್ಥೆಯನ್ನು ನಿಗದಿಪಡಿಸಲಾಯಿತು. ಅಂದಿನಿಂದ ಇದೇ ವ್ಯವಸ್ಥೆ ಮುಂದುವರಿದಿದೆ.
10 ಅಂಕೆಗಳ ಮೊಬೈಲ್ ನಂಬರ್‌ನ ಆರಂಭಿಕ 4 ಅಥವಾ 5 ಅಂಕೆಗಳು ಸಾಮಾನ್ಯವಾಗಿ ಟೆಲಿಕಾಂ ಸೇವಾ ವಲಯ ಮತ್ತು ಆಪರೇಟರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸೂಚಿಸುತ್ತವೆ. ಉಳಿದ ಅಂಕೆಗಳು ಗ್ರಾಹಕರಿಗೆ ನೀಡಲಾದ ನಿರ್ದಿಷ್ಟ ಮೊಬೈಲ್ ನಂಬರ್ ಅನ್ನು ಸೂಚಿಸುತ್ತವೆ.
ಪ್ರತಿಯೊಂದು ದೇಶವೂ ತನ್ನ ಜನಸಂಖ್ಯೆ, ಮೊಬೈಲ್ ಬಳಕೆದಾರರ ಸಂಖ್ಯೆ ಮತ್ತು ಭವಿಷ್ಯದ ಅಗತ್ಯಗಳನ್ನು ಆಧರಿಸಿ ಮೊಬೈಲ್ ನಂಬರ್‌ನಲ್ಲಿ ಎಷ್ಟು ಅಂಕೆಗಳಿರಬೇಕು ಎಂಬುದನ್ನು ನಿರ್ಧರಿಸುತ್ತದೆ.

