ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಪ್ರೀ-ಸೇಲ್ಸ್ ಮೂಲಕವೇ ಕರ್ನಾಟಕದಲ್ಲಿ ಬರೋಬ್ಬರಿ 17.1 ಕೋಟಿ ಕಲೆಕ್ಷನ್ ಮಾಡಿದ್ದು, ಆ ಮೂಲಕ ಸ್ಯಾಂಡಲ್‌ವುಡ್‌ನ ಸಾರ್ವಕಾಲಿಕ ಟಾಪ್ 5 ಓಪನರ್‌ಗಳ ಪಟ್ಟಿಗೆ ಎಂಟ್ರಿ ಪಡೆದಿದೆ ಎಂಬ ವರದಿ ಹೊರಬಿದ್ದಿದೆ.
ಕರ್ನಾಟಕದ ಬಾಕ್ಸ್ ಆಫೀಸ್‌ನಲ್ಲಿ ‘ಕೆಜಿಎಫ್: ಚಾಪ್ಟರ್ 2’ 35 ಕೋಟಿ ರೂ ಗಳಿಸುವ ಮೂಲಕ ದೊಡ್ಡ ಓಪನಿಂಗ್ ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದು, ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ 27 ಕೋಟಿಗೂ ಹೆಚ್ಚು ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ರಿಷಬ್ ಶೆಟ್ಟಿ ನಿರ್ದೇಶನ-ನಟನೆಯ ‘ಕಾಂತಾರ: ಚಾಪ್ಟರ್ 1’ 25.2 ಕೋಟಿ ಗಳಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ.
‘ವಿಕ್ರಾಂತ್ ರೋಣ’ 18.5 ಕೋಟಿಗೂ ಅಧಿಕ ಆರಂಭಿಕ ಗಳಿಕೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇದೀಗ 17.1 ಕೋಟಿಗೂ ಹೆಚ್ಚು ಪ್ರೀ-ಸೇಲ್ಸ್‌ನೊಂದಿಗೆ ‘ಟಾಕ್ಸಿಕ್’ ಐದನೇ ಸ್ಥಾನಕ್ಕೆ ಕಾಲಿಟ್ಟಿದ್ದು, ಬಿಡುಗಡೆಗೆ ಇನ್ನೂ 2 ದಿನಗಳು ಬಾಕಿ ಇದ್ದು, ಕೆಜಿಎಫ್ ಚಾಪ್ಟರ್ 2 ದಾಖಲೆ ಮುರಿದು ನಂಬರ್ ಒನ್ ಸ್ಥಾನಕ್ಕೇರುವ ಸಾಧ್ಯತೆಗಳಿವೆ.
ಚಿತ್ರದ ಅಡ್ವಾನ್ಸ್ ಬುಕಿಂಗ್‌ಗೆ ಕರ್ನಾಟಕದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟಾರೆ ಪ್ರೀ-ಬುಕಿಂಗ್ ಕೂಡ ವೇಗವಾಗಿ ಸಾಗುತ್ತಿದೆ.
ಇನ್ನು ಸಿನಿಮಾ ಬಿಡುಗಡೆಯಾಗಲು ಮುನ್ನವೇ ಇಂತಹ ಬೃಹತ್ ಮೊತ್ತ ದಾಖಲಾಗಿರುವುದು ಯಶ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಟಾಕ್ಸಿಕ್’ ಬಿಡುಗಡೆಯ ಬಳಿಕ ಈ ದಾಖಲೆ ಮತ್ತಷ್ಟು ಏರಿಕೆಯಾಗುತ್ತದೆಯೇ ಎಂಬ ಕುತೂಹಲ ಇದೀಗ ಗರಿಗೆದರಿದೆ.

