HomeIndiaBIG NEWS : 2029ರಲ್ಲೇ ‘ಒಂದು ದೇಶ–ಒಂದು ಚುನಾವಣೆ’ ಜಾರಿ ; ಪ್ರಧಾನಿ ಮೋದಿ ಮಾಸ್ಟರ್...

BIG NEWS : 2029ರಲ್ಲೇ ‘ಒಂದು ದೇಶ–ಒಂದು ಚುನಾವಣೆ’ ಜಾರಿ ; ಪ್ರಧಾನಿ ಮೋದಿ ಮಾಸ್ಟರ್ ಪ್ಲ್ಯಾನ್?

ಭಾರತದ ರಾಜಕೀಯ ವಲಯದಲ್ಲಿ ಇದೀಗ ‘ಒಂದು ದೇಶ–ಒಂದು ಚುನಾವಣೆ’ (One Nation, One Election) ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. 2029ರ ವೇಳೆಗೆ ದೇಶಾದ್ಯಂತ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಒಂದು ದೇಶ–ಒಂದು ಚುನಾವಣೆ ಜಾರಿಗೆ ತರುವ ಪ್ರಸ್ತಾವನೆ ಮತ್ತೆ ಚರ್ಚೆಯಲ್ಲಿದ್ದು, 2029ರ ಲೋಕಸಭಾ ಚುನಾವಣೆಯೊಂದಿಗೆ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಾಧ್ಯತೆಯನ್ನು ಎನ್‌ಡಿಎ ಪರಿಶೀಲಿಸುತ್ತಿದೆ.

ದೇಶದ ಯಾವುದಾದರೊಂದು ರಾಜ್ಯದಲ್ಲಿ ಪದೇಪದೇ ಚುನಾವಣೆಗಳು ನಡೆಯುವುದರಿಂದ ರಾಜಕೀಯ ವಾತಾವರಣ ಬಿಸಿಯಾಗುವುದರ ಜೊತೆಗೆ, ಸರ್ಕಾರದ ಆಡಳಿತದ ಮೇಲಿನ ಗಮನವೂ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ಕೇಂದ್ರ ಸರ್ಕಾರದ್ದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೋದಿ ಮಾಸ್ಟರ್ ಪ್ಲ್ಯಾನ್?

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ಚುನಾವಣಾ ಪ್ರಕ್ರಿಯೆಗೆ ಸರ್ಕಾರದ ಬೊಕ್ಕಸದಿಂದ ಖರ್ಚಾಗುವ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರತ್ಯೇಕವಾಗಿ ಚುನಾವಣೆಗಳನ್ನು ನಡೆಸುವುದರಿಂದ ಅಪಾರ ಪ್ರಮಾಣದ ಸಾರ್ವಜನಿಕ ಹಣ ವ್ಯಯವಾಗುವುದರ ಜೊತೆಗೆ, ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯ ಮೇಲೂ ಹೆಚ್ಚಿನ ಒತ್ತಡ ಬೀಳುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಆದರೆ, ಈ ಯೋಜನೆಯನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ ಎಂಬ ಮಾತು ವಿರೋಧ ಪಕ್ಷಗಳಿಂದ ಕೇಳಿಬರುತ್ತಿದೆ. ‘ಒಂದು ದೇಶ–ಒಂದು ಚುನಾವಣೆ’ ಜಾರಿಗೆ ತರಲು ಸಂವಿಧಾನದಲ್ಲಿ ಹಲವು ಪ್ರಮುಖ ತಿದ್ದುಪಡಿಗಳನ್ನು ಮಾಡಬೇಕಾಗಬಹುದು. ಅಲ್ಲದೆ, ಎಲ್ಲ ರಾಜಕೀಯ ಪಕ್ಷಗಳ ಬೆಂಬಲವೂ ಅತ್ಯಂತ ಅಗತ್ಯವಾಗಿದೆ.

ಇಷ್ಟೆಲ್ಲ ಸವಾಲುಗಳ ನಡುವೆಯೂ ಯೋಜನೆಯನ್ನು ನಿಗದಿತ ಸಮಯಕ್ಕೆ ಜಾರಿಗೊಳಿಸಲು ಕೇಂದ್ರ ಸರ್ಕಾರ ರೂಪುರೇಷೆ ಸಿದ್ಧಪಡಿಸುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ.

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಇದು ಮಹತ್ವದ ಚುನಾವಣಾ ಸುಧಾರಣೆಯಾಗಲಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಈ ಕುರಿತ ಮಸೂದೆ ಬಗ್ಗೆ ಯಾವ ರೀತಿಯ ಚರ್ಚೆ ನಡೆಯಲಿದೆ ಹಾಗೂ ವಿರೋಧ ಪಕ್ಷಗಳ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ‘ಒಂದು ದೇಶ–ಒಂದು ಚುನಾವಣೆ’ ಕುರಿತಾಗಿ ಸಾರ್ವಜನಿಕ ವಲಯದಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಭವಿಷ್ಯದ ರಾಜಕೀಯದಲ್ಲಿ ಈ ಪರಿಕಲ್ಪನೆ ಯಾವ ರೀತಿಯ ಬದಲಾವಣೆ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular