ಭಗೀರಥ ಚಿತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಟ ಜೆಪಿ. ಕನ್ನಡ ಚಿತ್ರಗಳನ್ನು ನೋಡಲು ಚಿತ್ರಮಂದಿರಗಳಿಗೆ ಜನ ಬರುವುದಿಲ್ಲ ಎಂಬ ಸಮಯದಲ್ಲಿ ನೂರು ದಿನಗಳನ್ನು ಬೆಂಗಳೂರಿನ ಕೆಜಿ ರಸ್ತೆಯ ಸಪ್ನ ಚಿತ್ರಮಂದಿರದಲ್ಲಿ ಪೂರೈಸಿದ ಭಗೀರಥ ಚಿತ್ರ ನಿಜವಾಗಿಯೂ ಈ ಚಿತ್ರ ಇಷ್ಟು ದಿನ ಪ್ರದರ್ಶನಗೊಂಡಿತಾ ಎಂದು ಸದ್ದು ಮಾಡಿತ್ತು.
ಟ್ರೋಲ್ ಪೇಜ್‌ಗಳು ಭಗೀರಥ ಶತ ದಿನ ಪೂರೈಸಿದ್ದನ್ನು ಟ್ರೋಲ್ ಮಾಡಿದ ಕಾರಣ ಇಂದು ನೆಟ್ಟಿಗರಿಗೆ ಈ ಚಿತ್ರದ ಬಗ್ಗೆ ಚೆನ್ನಾಗಿ ಗೊತ್ತು ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಚಿತ್ರತಂಡ ತಮ್ಮ ಚಿತ್ರವನ್ನು ಜನ ವೀಕ್ಷಿಸಿದ್ದಾರೆ ಎಂದು ಹೇಳಿಕೊಂಡು ಶತ ದಿನೋತ್ಸವವನ್ನೂ ಸಹ ಆಚರಿಸಿತು.
ಹೀಗೆ ಟ್ರೋಲ್ ಮೂಲಕ ವೈರಲ್ ಆದ ನಟ ಜೆಪಿ ದಿಗ್ದರ್ಶಕ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಬಗ್ಗೆ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿತ್ರ ಬಿಡುಗಡೆಗೆ ಸಿದ್ಧವಿದ್ದು, ಯಾವಾಗ ಬಿಡುಗಡೆ ಎಂದು ಜೆಪಿ ಅವರಿಗೆ ಮಾಧ್ಯಮದವರು ಪ್ರಶ್ನಿಸಿದಾಗ ಟಾಕ್ಸಿಕ್ ಬಂದ ಬಳಿಕ ಬಿಡುಗಡೆ ಮಾಡುತ್ತೇವೆ, ಅದರ ಜತೆ ಪೈಪೋಟಿಗೆ ಇಳಿಯಲು ಇಚ್ಛಿಸುವುದಿಲ್ಲ ಎಂದು ಹೇಳಿರುವುದು ವೈರಲ್ ಆಗಿದೆ.
ಬಿಡುಗಡೆ ಯಾವಾಗ ಎಂದು ಪ್ರಶ್ನೆ ಕೇಳಿದ್ದಕ್ಕೆ ಯಶ್ ತಮ್ಮ ಸ್ನೇಹಿತರಾಗಿದ್ದು, ಟಾಕ್ಸಿಕ್ ಬಿಡುಗಡೆ ಬಳಿಕ ತಮ್ಮ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡುತ್ತೇವೆ, ನಾವು ಯಾರ ಜತೆಗೂ ಪೈಪೋಟಿಗೆ ಇಳಿಯುವುದಿಲ್ಲ, ಈ ಹಿಂದೆ ಭಗೀರಥವನ್ನು ಸಹ ಅಷ್ಟೇ ಮಾರ್ಟಿನ್, ಯುಐ ಹಾಗೂ ಮ್ಯಾಕ್ಸ್ ಚಿತ್ರಗಳ ಬಳಿಕ ಬಿಡುಗಡೆ ಮಾಡಿದೆವು ಎಂದರು. ಅಂದು ಆ ಚಿತ್ರಗಳಿಗೆ ಜನ ಬರಲು ಆರಂಭಿಸಿದರು, ಹಾಗೆಯೇ ಭಗೀರಥಕ್ಕೂ ಸಹ ಬಂದರು, ಈಗಲೂ ಹಾಗೆಯೇ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.

