ಕೆಜಿಎಫ್ ಚಿತ್ರ ಸರಣಿಯ ಬೃಹತ್ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟಿಸಿದ ಟಾಕ್ಸಿಕ್ ಚಿತ್ರ ಘೋಷಣೆಯಾದಾಗಿನಿಂದಲೂ ದೊಡ್ಡ ಮಟ್ಟದ ಹೈಪ್ ಹುಟ್ಟಿಹಾಕಿದ್ದು, ಹಲವು ಮುಂದೂಡಿಕೆಗಳ ಬಳಿಕ ಇಂದು ( ಆಗಸ್ಟ್ 26 ) ಪ್ರೇಕ್ಷಕರಿಗೆ ದರ್ಶನ ನೀಡಿದೆ.
ಇನ್ನು ಚಿತ್ರದ ಅಡ್ವಾನ್ಸ್ ಬುಕಿಂಗ್ ಎಲ್ಲ ಭಾಷೆಗಳಲ್ಲೂ ಭರ್ಜರಿಯಾಗಿ ನಡೆದಿದ್ದು, ಮುಂಗಡ ಬುಕಿಂಗ್‌ನಲ್ಲೇ ಭರ್ಜರಿ 85 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿ ಅಬ್ಬರಿಸಿದೆ. ಹೀಗೆ ಕೆಜಿಎಫ್ ಬಳಿಕ ಮತ್ತೊಮ್ಮೆ ಅಬ್ಬರಿಸುತ್ತಿರುವ ಯಶ್ ನಟನೆಯ ಟಾಕ್ಸಿಕ್ ಯಾವ ರೀತಿ ಇರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದು, ಯಶ್ ಮತ್ತೊಮ್ಮೆ ಗೆದ್ದೇಬಿಡ್ತಾನಾ ಎಂಬ ಆತಂಕವೂ ಹಲವರಲ್ಲಿ ಇದ್ದಂತೆ ಕಾಣುತ್ತಿದೆ.
ಇದಕ್ಕೆ ಕಾರಣ ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ಟ್ಟಿಟರ್ ಖಾತೆಯಲ್ಲಿ ಕಂಡುಬಂದ ಹೊಟ್ಟೆಕಿಚ್ಚಿನ ಟ್ವೀಟ್‌ಗಳು ಹಾಗೂ ಸದ್ಯ ಚಿತ್ರದ ಪ್ರದರ್ಶನ ಇನ್ನೂ ಮುಗಿಯದೇ ಇದ್ದರೂ ಹರಿದಾಡುತ್ತಿರುವ ಫ್ಲಾಪ್ ಎಂಬ ವಿಮರ್ಶೆಗಳು.
ಹೌದು, ಟಾಕ್ಸಿಕ್ ಇಂದು ಆರು ಗಂಟೆಯಿಂದ ಭಾರತದಲ್ಲಿ ಪ್ರದರ್ಶನ ಆರಂಭಿಸಿದ್ದು, ಏಳು ಗಂಟೆ ಹಾಗೂ ಏಳೂವರೆಗೆಲ್ಲ ಭಾರತದ ಪೇಜ್‌ಗಳು, ಅದರಲ್ಲೂ ತೆಲುಲು ಪೇಜ್‌ಗಳು ಚಿತ್ರದ ವಿಮರ್ಶೆಗಳನ್ನು ಹಂಚಿಕೊಂಡಿವೆ. ವಿದೇಶದಲ್ಲಿ ಇರುವ ಅಡ್ಮಿನ್‌ಗಳು ಚಿತ್ರ ವೀಕ್ಷಿಸಿ ವಿಮರ್ಶೆ ಹಂಚಿಕೊಂಡಿದ್ದಾರೆ ಎನ್ನುವುದಾದರೆ ಪ್ರತಿ ಪೇಜ್‌ನ ಅಡ್ಮಿನ್ ವಿದೇಶದಲ್ಲೇ ಇದ್ದಾರಾ ಎಂಬ ಅನುಮಾನಗಳು ಕಾಡಿವೆ.
ಅಲ್ಲದೇ ತೆಲುಗಿನ ಅನೇಕ ಪೇಜ್‌ಗಳು ಒಂದೇ ಸಮಯಕ್ಕೆ ಮೊದಲಾರ್ಧದ ವಿಮರ್ಶೆಗಳನ್ನು ಹಾಕಿದ್ದು, ಭಾರತದ ಜನರು ಎದ್ದು ಟ್ವಿಟರ್ ನೋಡುವ ಸಮಯ ಎಂದರೆ ಏಳೂವರೆ, ಎಂಟು ಗಂಟೆಗೆ ಸರಿಯಾಗಿ ಚಿತ್ರದ ಪೂರ್ಣ ವಿಮರ್ಶೆಯನ್ನು ಪ್ರಕಟಿಸಿದ್ದು, ಚಿತ್ರದ ವಿರುದ್ಧ ಮಾಡಿರುವ ಮಸಲತ್ತಾ ಎಂಬ ಅನುಮಾನ ಹುಟ್ಟುಹಾಕಿವೆ.
ಇನ್ನು ಸಮಯ ಮಾತ್ರವಲ್ಲದೇ ಎಲ್ಲ ವಿಮರ್ಶೆಗಳಲ್ಲಿನ ಅಂಶ ಒಂದೇ ಇದೆ. ಮೊದಲಾರ್ಧಲ್ಲಿ ಕಂಟೆಂಟ್ ಇಲ್ಲ, ಬರೀ ಬೋಲ್ಡ್ ಸೀನ್‌ಗಳು ಹಾಗೂ ಆಕ್ಷನ್ ಜಾಸ್ತಿ ಎನ್ನಲಾಗಿದ್ದು, ಚಿತ್ರ ಟಾರ್ಚರ್ ಎನ್ನುತ್ತಿದ್ದಾರೆ. ಚಿತ್ರದ ಬಗ್ಗೆ ಯಾರೊಬ್ಬರೂ ಒಂದೇ ಒಂದು ಒಳ್ಳೆಯ ಅಂಶವನ್ನೂ ಪ್ರಕಟಿಸಿಲ್ಲ.
ಹೀಗೆ ಬಹುತೇಕ ತೆಲುಗು ಪೇಜ್‌ಗಳು ಒಂದೇ ರೀತಿಯ ವಿಮರ್ಶೆಗಳನ್ನು ಪ್ರಕಟಿಸುತ್ತಿರುವುದು ಸಾಕಷ್ಟು ಅನುಮಾನ ಮೂಡಿಸಿದ್ದು, ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದ ತೆಲುಗಿನ ಇರುಮುಡಿ ಚಿತ್ರವನ್ನು ಮಕಾಡೆ ಮಲಗಿಸಿದ್ದೇ ಈ ಮಸಲತ್ತಿಗೆ ಕಾರಣವಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ಹೌದು, ರವಿತೇಜಾ ನಟನೆಯ ಇರುಮುಡಿ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿತ್ತು. ಆದರೆ ಟಾಕ್ಸಿಕ್ ಬಿಡುಗಡೆಯಾಗುತ್ತಿರುವ ಕಾರಣ ಇಂದಿನಿಂದ ತೆಲುಗು ರಾಜ್ಯಗಳಲ್ಲಿ ಇರುಮುಡಿ ಪ್ರದರ್ಶನ ಕಾಣುತ್ತಿದ್ದ ಅನೇಕ ಕೇಂದ್ರಗಳಲ್ಲಿ ಟಾಕ್ಸಿಕ್ ಬಿಡುಗಡೆಯಾಗಿದೆ. ಇದನ್ನು ವಿರೋಧಿಸಿದ್ದ ತೆಲುಗು ಮಂದಿ ಟಾಕ್ಸಿಕ್‌ನಿಂದ ಇರುಮುಡಿ ಕಾಪಾಟಿ ಎಂದು ಟ್ರೆಂಟ್ ಕೂಡ ಮಾಡಿದ್ದರು. ಈ ಕಾರಣಕ್ಕೇನಾದರೂ ಬೇಕಂತಲೇ ಟಾಕ್ಸಿಕ್ ವಿರುದ್ಧ ತೆಲುಗು ಮಂದಿ ಮಸಲತ್ತು ಮಾಡುತ್ತಿದ್ದಾರಾ ಅಥವಾ ನಿಜಕ್ಕೂ ಟಾಕ್ಸಿಕ್ ಚಿತ್ರ ಅವರು ಹೇಳಿದ ಹಾಗೆ ಚೆನ್ನಾಗಿಲ್ವಾ ಎಂಬ ಸಂಗತಿ ತಿಳಿಯಬೇಕೆಂದರೆ ನೈಜ ಪ್ರೇಕ್ಷಕರ ವಿಮರ್ಶೆ ಹೊರಬೀಳಬೇಕಿದೆ.

