ಬೆಂಗಳೂರು: ಮನೆಯ ಕೆಲಸಗಳನ್ನು ಮಾಡಲು, ಪತಿ ಮತ್ತು ಪತಿಯ ಪೋಷಕರನ್ನು ನೋಡಿಕೊಳ್ಳಲು ಪತ್ನಿ ಮನೆ ಕೆಲಸದ ಉದ್ಯೋಗಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿ ಎನಿಸಿಕೊಂಡ ಮಹಿಳೆ ಮನೆಯ ಕೆಲಸ ಮಾಡಲು, ಪತಿ ಮತ್ತು ಆತನ ಪೋಷಕರನ್ನು ನೋಡಿಕೊಳ್ಳಲು ನೇಮಕವಾದ ಉದ್ಯೋಗಿಯಲ್ಲ ಎಂದು ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ಚಿಲಕೂರು ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶ ನೀಡಿದೆ.
ಜೀವನಾಂಶಕ್ಕೆ ಸಂಬಂಧಿಸಿದಂತೆ 36 ವರ್ಷದ ಪತಿ ಸಲ್ಲಿಸಿದ್ದ ಕೌಟುಂಬಿಕ ನ್ಯಾಯಾಲಯದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಪತ್ನಿ ಮತ್ತು 5 ವರ್ಷದ ಪುತ್ರಿಗೆ ಪ್ರತಿ ತಿಂಗಳು 9000 ರೂ. ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ 2025ರ ನವೆಂಬರ್ ನಲ್ಲಿ ನೀಡಿರುವ ಆದೇಶ ರದ್ದುಪಡಿಸಬೇಕು. ಜೀವನಾಂಶ ಮೊತ್ತದಲ್ಲಿ ಬದಲಾವಣೆ ಮಾಡಬೇಕೆಂದು ಕೋರಿದ್ದ ಪತಿಯ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಮಹಿಳೆ ತನ್ನ ಪೋಷಕರ ಮನೆಗೆ ಹೋಗಲು ಗಂಡ ಅಥವಾ ಅತ್ತೆ, ಮಾವನ ಅನುಮತಿ ಪಡೆಯಬೇಕು ಎನ್ನುವುದು ಪತಿಯ ಸರ್ವಾಧಿಕಾರಿ ಮನಸ್ಥಿತಿ ತೋರಿಸುತ್ತದೆ. ಮದುವೆ ಎನ್ನುವುದು ಪತ್ನಿಯ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ನಿಯಂತ್ರಿಸುವ ಪರವಾನಿಗೆಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪೋಷಕರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ಪುತ್ರ ಅಥವಾ ಪುತ್ರಿಯ ಮೇಲಿರುತ್ತದೆ ಹೊರತೂ ಸೊಸೆ ಅಥವಾ ಅಳಿಯನ ಮೇಲೆ ಅಲ್ಲ. ಇಂತಹ ಕಾಳಜಿ ಸ್ವಯಂ ಪ್ರೇರಿತವಾಗಿ ಇರಬೇಕೆ ಹೊರತೂ ಬಲವಂತವಾಗಿ ಹೇರುವಂತಹುದಲ್ಲ ಎಂದು ಹೇಳಿದೆ. ತನ್ನ ವೃತ್ತಿ ಹಣಕಾಸಿಗೆ ಸಂಬಂಧಿಸಿದಂತೆ ಮಹಿಳೆ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ. ತನ್ನ ಇಚ್ಛೆ ನಿರೀಕ್ಷೆಗಳ ರೀತಿಯೇ ಬದುಕಬೇಕು ಎಂದು ಪತಿ ಒತ್ತಾಯ ಮಾಡಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

