ರಾಕಿಂಗ್ ಸ್ಟಾರ್ ಯಶ್ ನಟನೆಯ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಇದೇ ತಿಂಗಳ 26ರಂದು ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಗೆ ಬರುತ್ತಿದೆ.
ಕೆಜಿಎಫ್ ಚಿತ್ರ ಸರಣಿಯ ಬೃಹತ್ ಯಶಸ್ಸಿನ ಬಳಿಕ ಯಶ್ ಟಾಕ್ಸಿಕ್ ತನ್ನ ಮುಂದಿನ ಚಿತ್ರ ಎಂದು ಘೋಷಿಸಿದ ದಿನದಿಂದಲೇ ಚಿತ್ರಕ್ಕೆ ದೊಡ್ಡ ಮಟ್ಟದ ಹೈಪ್ ಹುಟ್ಟಿಕೊಂಡಿದ್ದು, ಯಶ್ ಅಭಿಮಾನಿಗಳು ಮಾತ್ರವಲ್ಲದೇ ಭಾರತೀಯ ಸಿನಿಫಿಲ್‌ಗಳು ಚಿತ್ರಕ್ಕಾಗಿ ಕಾತರರಾಗಿ ಕಾಯುತ್ತಿದ್ದರು.
ಹೀಗೆ ದೇಶದಾದ್ಯಂತ ನಿರೀಕ್ಷೆ ಹುಟ್ಟುಹಾಕಿದ್ದ ಟಾಕ್ಸಿಕ್ ತನ್ನ ಟೀಸರ್‌ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ದೊಡ್ಡ ಕೇಂದ್ರ ಬಿಂದುವಾಗಿ ಇನ್ನಷ್ಟು ಹೈಪ್ ಹೆಚ್ಚಿಸಿತ್ತು. ಸದ್ಯ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಮುಂಗಡ ಟಿಕೆಟ್ ಬುಕಿಂಗ್ ಯಾವಾಗ ಆರಂಭವಾಗಲಿದೆ ಎಂದು ದೇಶದಾದ್ಯಂತ ಸಿನಿ ರಸಿಕರು ಕಾಯುತ್ತಿದ್ದರು.
ಅದರಂತೆ ನಿನ್ನೆ ( ಆಗಸ್ಟ್ 21 ) ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ರಾತ್ರಿ ವೇಳೆಗೆ 20 ಕೋಟಿ ರೂ ಗಳಿಕೆಯಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್‌ಗಳಿಗೆ ಒಂದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಅಬ್ಬರದ ಬುಕಿಂಗ್ ನಡೆದಿದೆ.
ಹೀಗೆ ಟಾಕ್ಸಿಕ್ ಧೂಳೆಬ್ಬಿಸುತ್ತಿದ್ದಂತೆ ಕೆಲವೊಂದಷ್ಟು ಮಂದಿ ಎಕ್ಸ್‌ನಲ್ಲಿ ಟಾಕ್ಸಿಕ್ ಬುಕಿಂಗ್ ನಕಲಿ, ಚಿತ್ರತಂಡ ಕಾರ್ಪೋರೇಟ್ ಬುಕಿಂಗ್ ಮಾಡಿಸಿ ನಕಲಿ ಕ್ರೇಜ್ ಹುಟ್ಟುಹಾಕಿದೆ ಎಂದು ಬರೆದುಕೊಳ್ಳುತ್ತಿದ್ದಾರೆ.
ಆದರೆ ಅಸಲಿಯತ್ತಿಗೆ ಚಿತ್ರತಂಡಕ್ಕೆ ಕಾರ್ಪೋರೇಟ್ ಬುಕಿಂಗ್ ಅವಶ್ಯಕತೆ ಇದೆಯಾ ಎಂದು ನೋಡಿದರೆ ಖಂಡಿತವಾಗಿಯೂ ಇಲ್ಲ. ಏಕೆಂದರೆ ಚಿತ್ರಕ್ಕೆ ನೈಜ ಕ್ರೇಜ್ ಇದೆ. ಯಶ್ ಕೆಜಿಎಫ್ ಮಾಡಿ ಗೆದ್ದಿರುವ ನಟ. ಅದಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಮುಂದಿನ ಚಿತ್ರಕ್ಕೆ ಕ್ರೇಜ್ ಹುಟ್ಟಿಸಲು ಕಾರ್ಪೋರೇಟ್ ಬುಕಿಂಗ್ ಆದ್ರೂ ಏಕೆ ಬೇಕು? ಅಲ್ಲದೇ ಟಿಕೆಟ್ ಬುಕ್ ಮಾಡಲು ಹೋದ ಸಿನಿ ರಸಿಕರಿಗೆ ಟಿಕೆಟ್ ಪಡೆಯುವುದು ಎಷ್ಟು ಕಷ್ಟ, ಕ್ರೇಜ್ ಎಷ್ಟರ ಮಟ್ಟಿಗಿದೆ ಎಂಬುದರ ಅನುಭವವಾಗಿದೆ. ಇಷ್ಟದ ಸೀಟ್ ಸೆಲೆಕ್ಟ್ ಮಾಡಿ ಸ್ವಲ್ಪ ತಡ ಮಾಡಿದರೂ ಕೆಲವೇ ನಿಮಿಷಗಳಲ್ಲಿ ಆ ಟಿಕೆಟ್ ಬೇರೆಯವರ ಪಾಲಾಗಿಬಿಟ್ಟಿವೆ.
ಇನ್ನು ನಕಲಿ ಬುಕಿಂಗ್ ಮಾಡಿಸಿದರೆ ಬಿಡುಗಡೆಯ ದಿನ ಅಲ್ಲಿಗೆ ನಕಲಿ ಪ್ರೇಕ್ಷಕರನ್ನು ಕಳಿಸಲು ಆಗುತ್ತಾ? ಈ ಸಾಮಾನ್ಯ ಪರಿಜ್ಞಾನವೂ ಇಲ್ಲದ ಯಶ್ ವಿರೋಧಿಗಳು ಈ ಸುಳ್ಳು ಸುದ್ದಿಯನ್ನು ಹರಡಿ ಸ್ವಯಂ ಸಂತೋಷ ಹುಡುಕಿಕೊಳ್ಳಲು ಯತ್ನಿಸುತ್ತಿದ್ದಾರೆ.

