ಬೆಂಗಳೂರು: ನವೆಂಬರ್ 13ರಂದು ಗಣ್ಯ ವ್ಯಕ್ತಿಗಳು ಬೆಂಗಳೂರು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ನಿರ್ಬಂಧ ವಿಧಿಸಲಾಗಿದೆ. ವಿಶೇಷವಾಗಿ ಬನ್ನೇರುಘಟ್ಟ ರಸ್ತೆ, ಜಯದೇವ ಆಸ್ಪತ್ರೆ ಜಂಕ್ಷನ್, ಡೇರಿ ಸರ್ಕಲ್, ಅಡುಗೋಡಿ, ಜಯನಗರ, ಜೆ.ಪಿ. ನಗರ ಹಾಗೂ ಹುಳಿಮಾವು ಸುತ್ತಮುತ್ತ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಗಣ್ಯ ವ್ಯಕ್ತಿಗಳ ಸಂಚಾರದ ವೇಳೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರು ಸಂಚಾರ ಪೊಲೀಸರು ಈ ಮಾರ್ಗಸೂಚಿ ಹೊರಡಿಸಿದ್ದಾರೆ. ಹೀಗಾಗಿ ನವೆಂಬರ್ 13ರಂದು ಈ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಮುಂಚಿತವಾಗಿ ಪರ್ಯಾಯ ಮಾರ್ಗಗಳನ್ನು ತಿಳಿದುಕೊಳ್ಳುವುದು ಉತ್ತಮ.
1. ಅಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ
ಸಂಚಾರ ನಿರ್ಬಂಧ:
– ಬನ್ನೇರುಘಟ್ಟ ರಸ್ತೆಯ ಆನೇಕಲ್ ಪಾಳ್ಯ ಜಂಕ್ಷನ್‌ನಿಂದ ಡೇರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ಮೈಕೋ ಬೋಂಡೆ ಜಂಕ್ಷನ್ ಮತ್ತು ಡೇರಿ ಸರ್ಕಲ್ ಅಂಡರ್‌ಪಾಸ್ ಬಳಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.
ಪರ್ಯಾಯ ಮಾರ್ಗ:
-
ಆನೇಕಲ್ ಪಾಳ್ಯ ಜಂಕ್ಷನ್ ಕಡೆಯಿಂದ ಬರುವ ವಾಹನಗಳು ಮೈಕೋ ಬೋಂಡೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನ್ಯೂ ಮೈಕೋ ರಸ್ತೆ ಮೂಲಕ ಅಡುಗೋಡಿ ಜಂಕ್ಷನ್ ತಲುಪಬೇಕು. ಅಲ್ಲಿಂದ ಬಲ ತಿರುವು ಪಡೆದು ಹೊಸೂರು ಮುಖ್ಯ ರಸ್ತೆಯಲ್ಲಿ ಸಾಗಬಹುದು.
-
ಇನ್ನು ಕೆಲವು ವಾಹನಗಳು ಬಿ.ಜಿ. ರಸ್ತೆಯ ಮೂಲಕ ಡೇರಿ ಸರ್ಕಲ್ ಸರ್ವಿಸ್ ರಸ್ತೆಗೆ ಬಂದು, ಡೇರಿ ಸರ್ಕಲ್‌ನಲ್ಲಿ ಎಡ ತಿರುವು ಪಡೆದು ಡಾ. ಮರಿಗೌಡ ರಸ್ತೆ ಮೂಲಕ ಮಡಿವಾಳ ಚೆಕ್‌ಪೋಸ್ಟ್ ಹಾಗೂ ಹೊಸೂರು ರಸ್ತೆ ತಲುಪಬಹುದು.
2. ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ
ಸಂಚಾರ ನಿರ್ಬಂಧ:
-
ಮಾರೇನಹಳ್ಳಿ ಮುಖ್ಯ ರಸ್ತೆಯ 28ನೇ ಮುಖ್ಯ ರಸ್ತೆಯಿಂದ ಜಯದೇವ ಆಸ್ಪತ್ರೆ ಜಂಕ್ಷನ್ ಕಡೆಗೆ ವಿಐಪಿಗಳ ಸಂಚಾರದ ಸಮಯದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ.
-
ಈಸ್ಟ್ ಎಂಡ್ ಜಂಕ್ಷನ್‌ನಿಂದ ಸ್ವಾಗತ್ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನೂ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.
ಪರ್ಯಾಯ ಮಾರ್ಗ:
-
ಬನಶಂಕರಿ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ವಾಹನ ಸವಾರರು ವಿಐಪಿ ಸಂಚಾರದ ಸಮಯವನ್ನು ಹೊರತುಪಡಿಸಿ ರಾಗಿಗುಡ್ಡ ಡಬಲ್ ಡೆಕ್ಕರ್ ರಸ್ತೆ ಬಳಸಬಹುದು.
-
ಈಸ್ಟ್ ಎಂಡ್ ಜಂಕ್ಷನ್ ಕಡೆಯಿಂದ ಸ್ವಾಗತ್ ಜಂಕ್ಷನ್‌ಗೆ ಹೋಗುವವರು 28ನೇ ಮುಖ್ಯ ರಸ್ತೆ ಹಾಗೂ ಈಸ್ಟ್ ಎಂಡ್ ರಸ್ತೆಯ ಮೂಲಕ ಬಲ ಅಥವಾ ಎಡ ತಿರುವು ಪಡೆದು ಸ್ವಾಗತ್ ರಸ್ತೆ ಮತ್ತು ಜೆ.ಪಿ. ನಗರ ಡಾಲರ್ಸ್ ಜಂಕ್ಷನ್ ಕಡೆಗೆ ತೆರಳಬಹುದು.
3. ಜೆ.ಪಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ
ಸಂಚಾರ ನಿರ್ಬಂಧ:
-
ಹೊರವರ್ತುಲ ರಸ್ತೆಯ 15ನೇ ಕ್ರಾಸ್ ಮತ್ತು 24ನೇ ಮುಖ್ಯರಸ್ತೆ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ಜಿ.ಡಿ. ಮರ ಜಂಕ್ಷನ್‌ವರೆಗೆ.
-
ಆರ್.ವಿ. ಡೆಂಟಲ್ ಜಂಕ್ಷನ್‌ನಿಂದ ಬನ್ನೇರುಘಟ್ಟ ಮುಖ್ಯರಸ್ತೆಯವರೆಗೆ (9ನೇ ಅಡ್ಡ ರಸ್ತೆ).
-
ಬಿ.ಪಿ.ಎಲ್. ಅರಕೆರೆ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ಮುಖ್ಯರಸ್ತೆಯವರೆಗೆ.
ಪರ್ಯಾಯ ಮಾರ್ಗ:
-
15ನೇ ಕ್ರಾಸ್‌ನಿಂದ ಜಿ.ಡಿ. ಮರ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧ ಇರುವುದರಿಂದ ಹೊಸೂರು ರಸ್ತೆ ಕಡೆಗೆ ಹೋಗುವವರು ಕನಕಪುರ ಮುಖ್ಯರಸ್ತೆಯ ಬನಶಂಕರಿ ಬಸ್ ನಿಲ್ದಾಣದ ಮೂಲಕ 46ನೇ ಅಡ್ಡ ರಸ್ತೆಯಲ್ಲಿ ಸಂಚರಿಸಬಹುದು.
-
ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವವರು ಕನಕಪುರ ಮುಖ್ಯರಸ್ತೆಯಲ್ಲಿ ಮುಂದುವರಿದು ಕೋಣನಕುಂಟೆ ಕ್ರಾಸ್ ಅಥವಾ ಎ2ಬಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ತೆರಳಬಹುದು.
-
ಬಿ.ಪಿ.ಎಲ್. ಅರಕೆರೆ ಮುಖ್ಯರಸ್ತೆಯಲ್ಲಿ ಸಂಚರಿಸುವವರು ಕೊತ್ತನೂರು ದಿಣ್ಣೆ ರಸ್ತೆ ಬಳಸಬಹುದು.
4. ತಳಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ
ಸಂಚಾರ ನಿರ್ಬಂಧ:
-
ಅಂಜನಾಪುರ 80 ಅಡಿ ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ವಿಐಪಿಗಳ ಸಂಚಾರದ ಸಮಯದಲ್ಲಿ ನಿರ್ಬಂಧಿಸಲಾಗುತ್ತದೆ.
-
ಗೊಟ್ಟಿಗೆರೆ ಕೆರೆ ಹಾಗೂ ಕರ್ನಾಟಕ ಬ್ಯಾಂಕ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೂ ನಿರ್ಬಂಧವಿರುತ್ತದೆ.
-
ಲೊಯೋಲಾ ಶಾಲೆಯ ಮುಂಭಾಗದ ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಪರ್ಯಾಯ ಮಾರ್ಗ:
-
ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಬರುವ ವಾಹನಗಳು ಅಂಜನಾಪುರ 80 ಅಡಿ ರಸ್ತೆ, ಬಿಎಂಟಿಸಿ ಡಿಪೋ, ತುಳಸಿಪುರ ಅಗ್ನಿಶಾಮಕ ಠಾಣೆ, ಲಾಲ್ ಬಹದ್ದೂರ್ ಶಾಸ್ತ್ರಿನಗರ ಹಾಗೂ ನಾರಾಯಣನಗರ ಜೋಡಿ ರಸ್ತೆ ಮೂಲಕ ಕನಕಪುರ ರಸ್ತೆ ಮತ್ತು ಎ2ಬಿ ಜಂಕ್ಷನ್ ತಲುಪಬಹುದು.
-
ಗೊಟ್ಟಿಗೆರೆ ಕಡೆಯಿಂದ ಬರುವ ವಾಹನಗಳು ಬಿಕ್ ಸರ್ಕಲ್, ಜಂಬೂಸವಾರಿ ದಿಣ್ಣೆ, ಭೈರಪ್ಪ ಸರ್ಕಲ್, ಗ್ಲಾಸ್ ಫ್ಯಾಕ್ಟರಿ, ಹರಿನಗರ ಕ್ರಾಸ್ ಹಾಗೂ ಕೋಣನಕುಂಟೆ ಕ್ರಾಸ್ ಮೂಲಕ ಕನಕಪುರ ರಸ್ತೆ ತಲುಪಬಹುದು.
-
ಲೊಯೋಲಾ ಶಾಲೆ ರಸ್ತೆಯಿಂದ ಬರುವ ವಾಹನಗಳು ಬಿಕ್ ಸರ್ಕಲ್, ಬ್ರಿಗೇಡ್ ಮಿಲೇನಿಯಂ ಸಿಗ್ನಲ್ ಹಾಗೂ ಜೆ.ಪಿ. ನಗರ ಪುಟ್ಟೇನಹಳ್ಳಿ ಕೆರೆ ಮೂಲಕ ಸಂಚರಿಸಬಹುದು.
5. ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ
ಸಂಚಾರ ನಿರ್ಬಂಧ:
ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಅರಕೆರೆ, ಬಿಳೇಕಹಳ್ಳಿ, ಮೈಕೋ ಲೇಔಟ್, ಡೇರಿ ಸರ್ಕಲ್ ಹಾಗೂ ನಗರದ ಇತರ ಭಾಗಗಳಿಗೆ ಹೋಗುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.
ಪರ್ಯಾಯ ಮಾರ್ಗಗಳು:
-
ಕೋಳಿ ಫಾರಂ ಗೇಟ್ ಜಂಕ್ಷನ್: ಬನ್ನೇರುಘಟ್ಟ ಗ್ರಾಮಾಂತರ ಕಡೆಯಿಂದ ಬರುವ ವಾಹನಗಳು ಬಲ ತಿರುವು ಪಡೆದು ಸಿ.ಕೆ. ಪಾಳ್ಯ ಜಂಕ್ಷನ್ ಮೂಲಕ ಬೇಗೂರು-ಕೊಪ್ಪ ರಸ್ತೆ ಹಾಗೂ ಹೊಸೂರು ರಸ್ತೆ ಮಾರ್ಗವಾಗಿ ನಗರದ ಕಡೆಗೆ ತೆರಳಬಹುದು.
-
ಶೇರ್‌ವುಡ್ ಜಂಕ್ಷನ್: ಇಲ್ಲಿ ಬಲ ತಿರುವು ಪಡೆದು ನ್ಯೂಸ್ ರಸ್ತೆ ಮೂಲಕ ಕನಕಪುರ ರಸ್ತೆ ತಲುಪಬಹುದು.
-
ಬಿಡಿಎ ಜಂಕ್ಷನ್: ಎಡ ತಿರುವು ಪಡೆದು ಅಂಜನಾಪುರ 80 ಅಡಿ ರಸ್ತೆ ಮೂಲಕ ಕನಕಪುರ ರಸ್ತೆ ತಲುಪಬಹುದು.
-
ಗೊಟ್ಟಿಗೆರೆ ಜಂಕ್ಷನ್: ಎಡ ತಿರುವು ಪಡೆದು ಜಂಬೂಸವಾರಿ ದಿಣ್ಣೆ ರಸ್ತೆ ಮೂಲಕ ಕನಕಪುರ ರಸ್ತೆ ತಲುಪಬಹುದು.
-
ಕಮ್ಮನಹಳ್ಳಿ ಜಂಕ್ಷನ್: ಬಲ ತಿರುವು ಪಡೆದು ದೊಡ್ಡ ಕಮ್ಮನಹಳ್ಳಿ ರಸ್ತೆ, ಹುಳಿಮಾವು ಲೇಕ್ ರಸ್ತೆ, ಡಿಎಲ್‌ಎಫ್ ಹುಳಿಮಾವು ರಸ್ತೆ ಹಾಗೂ ಸರ್ ಎಂ.ವಿ. ರಸ್ತೆ ಮೂಲಕ ಮೈಕೋ ಲೇಔಟ್, ಬಿಳೇಕಹಳ್ಳಿ ಮತ್ತು ನಗರದ ಕಡೆಗೆ ತೆರಳಬಹುದು.
-
ಮೀನಾಕ್ಷಿ ಮಾಲ್ ಜಂಕ್ಷನ್: ಬಲ ತಿರುವು ಪಡೆದು ಕೆವ್ ಟೆಂಪಲ್ ರಸ್ತೆ, ಡಿಎಲ್‌ಎಫ್ ಹುಳಿಮಾವು ರಸ್ತೆ ಹಾಗೂ ಸರ್ ಎಂ.ವಿ. ರಸ್ತೆ ಮೂಲಕ ಮೈಕೋ ಲೇಔಟ್, ಬಿಳೇಕಹಳ್ಳಿ ಮತ್ತು ಹೊಸೂರು ರಸ್ತೆ ಕಡೆಗೆ ಹೋಗಬಹುದು.
-
ಸಾಯಿ ಗಾರ್ಮೆಂಟ್ಸ್ ಜಂಕ್ಷನ್: ಬಲ ತಿರುವು ಪಡೆದು ಅರಕೆರೆ 80 ಅಡಿ ರಸ್ತೆ ಮೂಲಕ ಸರ್ ಎಂ.ವಿ. ರಸ್ತೆ ತಲುಪಿ ನಗರದ ಕಡೆಗೆ ಸಂಚರಿಸಬಹುದು.
ಇದಲ್ಲದೆ, ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಡೇರಿ ಸರ್ಕಲ್ ಜಂಕ್ಷನ್‌ನಿಂದ ಅರಕೆರೆ ಜಂಕ್ಷನ್‌ವರೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಗಣ್ಯ ವ್ಯಕ್ತಿಗಳ ಸಂಚಾರದ ಸಂದರ್ಭದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ
ನವೆಂಬರ್ 13ರಂದು ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
-
ಜೆ.ಪಿ. ನಗರ 2ನೇ ಹಂತದ 8ನೇ ಮುಖ್ಯರಸ್ತೆ.
-
15ನೇ ಕ್ರಾಸ್ ರಸ್ತೆಯ ಡಾಲರ್ಸ್ ಜಂಕ್ಷನ್‌ನಿಂದ ಬನ್ನೇರುಘಟ್ಟ ಮುಖ್ಯರಸ್ತೆಯವರೆಗೆ.
-
ಮಾರೇನಹಳ್ಳಿ ಮುಖ್ಯ ರಸ್ತೆ, ತಿಲಕ್ ನಗರ.
-
ಈಸ್ಟ್ ಎಂಡ್ ಮುಖ್ಯ ರಸ್ತೆ, ತಿಲಕ್ ನಗರ.
-
ಸ್ವಾಗತ್ ಮುಖ್ಯ ರಸ್ತೆ, ತಿಲಕ್ ನಗರ.
-
28ನೇ ಮುಖ್ಯ ರಸ್ತೆ, ಮಾರೇನಹಳ್ಳಿ.
ವಾಹನ ಸವಾರರಿಗೆ ಪೊಲೀಸರ ಮನವಿ
ನವೆಂಬರ್ 13ರಂದು ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಈ ರಸ್ತೆಗಳಲ್ಲಿ ಸಂಚರಿಸುವುದನ್ನು ತಪ್ಪಿಸಿ, ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

