ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 29 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಮಹತ್ವದ ನಿರ್ಧಾರದ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಪ್ರಾರಂಭದಲ್ಲಿ 45 ಪ್ರಕರಣಗಳ ಪರಿಶೀಲನೆ ನಡೆಸಲಾಗಿದ್ದು, ಅದರಲ್ಲಿ 28 ಬಂಧಿತರ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ನಂತರ, ಒಂದು ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆಯೂ ಲಭ್ಯವಾಗಿದ್ದು, ಒಟ್ಟು 29 ಜೀವಾವಧಿ ಶಿಕ್ಷಾ ಬಂಧಿಗಳು ಅವಧಿಪೂರ್ವ ಬಿಡುಗಡೆಗೆ ಅರ್ಹರಾಗಿದ್ದಾರೆ.
ಕೈದಿಗಳ ಜೈಲು ವಾಸದ ಅವಧಿ, ಅವರ ನಡವಳಿಕೆ ಮತ್ತು ನಿಗದಿತ ಮಾನದಂಡಗಳನ್ನು ಆಧರಿಸಿ 29 ಕೈದಿಗಳ ಬಿಡುಗಡೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಚಿವ ಸಂಪುಟದ ಈ ತೀರ್ಮಾನವನ್ನು ಈಗ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ. ರಾಜ್ಯಪಾಲರ ಅಂತಿಮ ಅಂಕಿತ ದೊರೆತ ನಂತರ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

