
ಪೋರ್ಚ್ ಗೀಸರ ವಶದಲ್ಲಿದ್ದ ಗೋವಾ 1961 ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಗೋವಾ ಅತ್ಯುತ್ತಮ ಪ್ರವಾಸಿ ತಾಣವೆಂದು ಗುರುತಿಸಲ್ಪಟ್ಟಿದೆ.
ವಿದೇಶಿ ಪ್ರವಾಸಿಗರು ಗೋವಾದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ದೇಶೀ ಪ್ರವಾಸಿಗರು ಕೂಡ ಆಗಾಗ ಗೋವಾದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಪಣಜಿ ಗೋವಾ ರಾಜ್ಯದ ರಾಜಧಾನಿಯಾಗಿದ್ದು, ಮಾರ್ಗೋವಾ, ಪೊಂಡಾ, ಮಾಪುಸಾ, ಲೊಂಡಾ ಮೊದಲಾದವು ಪ್ರಮುಖ ನಗರಗಳಾಗಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಪಶ್ಚಿಮಕ್ಕೆ ಇರುವ ಅರಬ್ಬೀ ಸಮುದ್ರದ ಸುಂದರ ಕಡಲತೀರ ಗೋವಾದ ಅಂದವನ್ನು ಹೆಚ್ಚಿಸಿದೆ.
ಕಲಂಗೂಟ್, ಕೊಲ್ವಾ, ಡೋನಾ ಪೌಲಾ, ಮೀರಾ ಮಾಲ್, ಅಂಜನಾ, ವೆಗಾಗೋರ್, ಆರಾಮ್ ಬೋಲ್ ಸೇರಿದಂತೆ ಹಲವಾರು ಬೀಚ್ ಗಳು ಇಲ್ಲಿವೆ.
ತೆಂಗು, ತಾಳೆ, ಗೋಡಂಬಿ ಮೊದಲಾದ ಮರಗಳು ಕಡಲ ತೀರದಲ್ಲಿ ಕಾಣ ಸಿಗುತ್ತವೆ. ಪಾರ್ಕ್, ಸರೋವರ ಜಲಪಾತ, ನದಿ ಗೋವಾ ಸೌಂದರ್ಯಕ್ಕೆ ಮೆರುಗು ನೀಡಿವೆ.
ಇನ್ನು ಸ್ಥಳೀಯ ಮತ್ತು ಪಾಶ್ಚಿಮಾತ್ಯ ನೃತ್ಯಗಳು, ಕೊಂಕಣಿ, ಮರಾಠಿ, ಇಂಗ್ಲೀಷ್, ಪೋರ್ಚ್ ಗೀಸ್ ಮೊದಲಾದ ಭಾಷೆಗಳನ್ನಾಡುವ ಜನರನ್ನು ಇಲ್ಲಿ ಕಾಣಬಹುದು.
ಜಲವಿಹಾರಕ್ಕೆ ಹೇಳಿ ಮಾಡಿಸಿದ ತಾಣ ಗೋವಾ. ದೋಣಿ, ಮೋಟಾರ್ ಬೋಟ್, ಲಾಂಚ್, ಸಣ್ಣ ನೌಕೆಗಳಲ್ಲಿ ವಿಹರಿಸಬಹುದಾಗಿದೆ. ಹಲವು ದೇವಾಲಯಗಳು, ಚರ್ಚ್ ಗಳು ಇಲ್ಲಿದ್ದು, ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಕರಕುಶಲ ವಸ್ತುಗಳಿಗೆ, ವಿದೇಶಿ ಉಡುಪುಗಳಿಗೂ ಗೋವಾ ಫೇಮಸ್. ಒಮ್ಮೆ ಬಿಡುವು ಮಾಡಿಕೊಂಡು ಗೋವಾ ನೋಡಿ ಬನ್ನಿ.