ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರವಾದ ಏಕಾದಶಿಗಳಲ್ಲಿ ಒಂದಾದ ‘ಜಯ ಏಕಾದಶಿ’ ಈ ತಿಂಗಳ 29ರಂದು (ಜನವರಿ 29) ಬರಲಿದೆ. ಈ ದಿನದಂದು ಭಕ್ತರು ಉಪವಾಸವಿದ್ದು ಶ್ರೀಮನ್ನಾರಾಯಣನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ವ್ರತವು ಆಧ್ಯಾತ್ಮಿಕ ಶುದ್ಧಿ ಮತ್ತು ದೈವಿಕ ಆಶೀರ್ವಾದವನ್ನು ನೀಡುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ. ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಈ ಏಕಾದಶಿಗೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯಿದೆ.
ಜಯ ಏಕಾದಶಿ ತಿಥಿ ಮತ್ತು ಮುಹೂರ್ತ
ಪಂಚಾಂಗದ ಪ್ರಕಾರ, ಜಯ ಏಕಾದಶಿ ತಿಥಿಯು ಜನವರಿ 28ರ ಬುಧವಾರ ಸಂಜೆ 4:35ಕ್ಕೆ ಪ್ರಾರಂಭವಾಗಿ, ಮರುದಿನ ಅಂದರೆ ಜನವರಿ 29ರ ಗುರುವಾರ ಮಧ್ಯಾಹ್ನ 1:55ಕ್ಕೆ ಮುಕ್ತಾಯವಾಗುತ್ತದೆ. ಉದಯ ತಿಥಿಯ ಪ್ರಕಾರ ಗುರುವಾರ ಉಪವಾಸವನ್ನು ಆಚರಿಸಲಾಗುತ್ತದೆ.
* ಪಾರಣೆ (ಉಪವಾಸ ಬಿಡುವ ಸಮಯ): ಜನವರಿ 30, ಶುಕ್ರವಾರ ಬೆಳಿಗ್ಗೆ 7:10 ರಿಂದ 9:20 ರ ನಡುವೆ ಉಪವಾಸವನ್ನು ಮುಕ್ತಾಯಗೊಳಿಸಲು ಶುಭ ಸಮಯವಾಗಿದೆ.
ವ್ರತದ ಮಹತ್ವ
ಜಯ ಏಕಾದಶಿಯು ಪಾಪಗಳನ್ನು ತೊಳೆದು, ಅಂತರಂಗದ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಹಕಾರಿಯಾಗಿದೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ವ್ರತವನ್ನು ನಿಷ್ಠೆಯಿಂದ ಆಚರಿಸುವ ಭಕ್ತರು ಪೂರ್ವ ಜನ್ಮದ ಕರ್ಮಗಳಿಂದ ಮುಕ್ತಿ ಪಡೆದು, ವಿಷ್ಣುವಿನ ಅನುಗ್ರಹ ಹಾಗೂ ಮೋಕ್ಷವನ್ನು ಪಡೆಯುತ್ತಾರೆ.
ಪಾಲಿಸಬೇಕಾದ ನಿಯಮಗಳು
* ಮುಂಜಾನೆ ಎದ್ದೇಳುವುದು: ಭಕ್ತರು ಮುಂಜಾನೆಯೇ ಎದ್ದು ಪವಿತ್ರ ಸ್ನಾನ ಮಾಡಿ ಪೂಜೆಯೊಂದಿಗೆ ಉಪವಾಸ ಆರಂಭಿಸಬೇಕು.
* ಉಪವಾಸದ ವಿಧ: ಅನೇಕರು ನಿರ್ಜಲ ಉಪವಾಸ (ನೀರು ಸೇವಿಸದೆ) ಮಾಡುತ್ತಾರೆ. ಇನ್ನು ಕೆಲವರು ತಮ್ಮ ಶಕ್ತಿಗೆ ಅನುಗುಣವಾಗಿ ಹಣ್ಣು ಅಥವಾ ಹಾಲನ್ನು ಸೇವಿಸಿ ವ್ರತ ಮಾಡುತ್ತಾರೆ.
*ಪೂಜೆ ಮತ್ತು ಮಂತ್ರ: ಮನೆ ಹಾಗೂ ದೇವಸ್ಥಾನಗಳಲ್ಲಿ ವಿಷ್ಣು ಪೂಜೆ, ಪವಿತ್ರ ಗ್ರಂಥಗಳ ಪಾರಾಯಣ ನಡೆಯುತ್ತದೆ. “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಜಪಿಸುವುದು ಮತ್ತು ಜಯ ಏಕಾದಶಿ ವ್ರತದ ಕಥೆಯನ್ನು ಕೇಳುವುದು ಶ್ರೇಯಸ್ಕರ.
ಆಧ್ಯಾತ್ಮಿಕ ಜಾಗೃತಿ
ಜಯ ಏಕಾದಶಿಯು ಕೇವಲ ಉಪವಾಸದ ದಿನವಲ್ಲ; ಇದು ಪ್ರತಿಯೊಬ್ಬರಲ್ಲೂ ಆಧ್ಯಾತ್ಮಿಕ ಪ್ರಜ್ಞೆ, ಭಕ್ತಿ ಮತ್ತು ಧಾರ್ಮಿಕ ಭಾವನೆಗಳನ್ನು ಎಚ್ಚರಿಸುವ ಸಂದರ್ಭವಾಗಿದೆ. ದೇವರ ಮೇಲಿನ ನಂಬಿಕೆ ಮತ್ತು ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಲು ಇಂತಹ ದಿನಗಳು ಪೂರಕವಾಗಿವೆ. ನಿಯಮ ನಿಷ್ಠೆಯಿಂದ ಈ ವ್ರತ ಮಾಡುವುದರಿಂದ ಜೀವನದಲ್ಲಿ ಸಾಮರಸ್ಯ, ಸಮೃದ್ಧಿ ಮತ್ತು ದೈವಿಕ ರಕ್ಷಣೆ ದೊರೆಯುತ್ತದೆ.
- ಜಯ ಏಕಾದಶಿ ವ್ರತದ ಪುರಾಣ ಕಥೆ
ಪದ್ಮ ಪುರಾಣದ ಪ್ರಕಾರ, ಈ ಕಥೆಯನ್ನು ಶ್ರೀಕೃಷ್ಣನು ಧರ್ಮರಾಜ ಯುಧಿಷ್ಠಿರನಿಗೆ ವಿವರಿಸುತ್ತಾನೆ:
ದೇವಲೋಕದಲ್ಲಿ ಇಂದ್ರನು ಆಳುತ್ತಿದ್ದಾಗ, ಗಂಧರ್ವರು ಮತ್ತು ಅಪ್ಸರೆಯರು ನಾಟ್ಯ ಹಾಗೂ ಗಾಯನ ಪ್ರದರ್ಶನ ನೀಡುತ್ತಿದ್ದರು. ಅಲ್ಲಿ ಮಾಲ್ಯವಾನ್ ಎಂಬ ಗಂಧರ್ವ ಮತ್ತು ಪುಷ್ಪವತಿ ಎಂಬ ಅಪ್ಸರೆ ಪರಸ್ಪರ ಪ್ರೇಮಪಾಶಕ್ಕೆ ಒಳಗಾಗಿದ್ದರು. ಒಂದು ದಿನ ಇಂದ್ರನ ಸಭೆಯಲ್ಲಿ ಗಾಯನ ಮಾಡುವಾಗ, ಪರಸ್ಪರರ ಮೋಹದಲ್ಲಿ ಮುಳುಗಿದ್ದ ಅವರು ತಪ್ಪು ತಪ್ಪುಗಳನ್ನ ಎಸಗಿದರು. ಇದರಿಂದ ಕುಪಿತಗೊಂಡ ಇಂದ್ರನು ಅವರನ್ನು “ಪಿಶಾಚಿಯಾಗಿ (ರಾಕ್ಷಸರಾಗಿ) ಭೂಲೋಕದಲ್ಲಿ ಅಲೆದಾಡಿ” ಎಂದು ಶಾಪ ನೀಡಿದನು.
ಹಿಮಾಲಯದ ಶೀತ ಪ್ರದೇಶದಲ್ಲಿ ಹಸಿವು ಮತ್ತು ಚಳಿಯಿಂದ ಕಂಗಾಲಾಗಿದ್ದಾಗ, ಕಾಕತಾಳೀಯ ಎಂಬಂತೆ ಆ ದಿನ ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿ ಆಗಿತ್ತು. ಶೀತದ ಕಾರಣದಿಂದ ಅವರಿಗೆ ಏನನ್ನೂ ತಿನ್ನಲು ಅಥವಾ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಉಪವಾಸವಿದ್ದು, ರಾತ್ರಿ ಪೂರ್ತಿ ಜಾಗರಣೆ ಮಾಡಿ ದೇವರನ್ನು ಸ್ಮರಿಸಿದರು. ಅವರ ಈ ಅರಿಯದ ಭಕ್ತಿಗೆ ಮೆಚ್ಚಿದ ಶ್ರೀಮನ್ನಾರಾಯಣನು ಅವರ ಪಾಪಗಳನ್ನು ಮನ್ನಿಸಿ, ಮರುದಿನ ಅವರಿಗೆ ಶಾಪ ವಿಮೋಚನೆ ನೀಡಿ ಮರಳಿ ದೇವಲೋಕಕ್ಕೆ ಕರೆಸಿಕೊಂಡನು ಎಂದು ಹೇಳಲಾಗುತ್ತದೆ.

