ಬೆಂಗಳೂರು: ತೊಗರಿ ಖರೀದಿಸುವ ಅವಧಿಯನ್ನು ಮೇ 15ರವರೆಗೆ ವಿಸ್ತರಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಕೇಂದ್ರ ಸಚಿವರೊಂದಿಗೆ ರಾಜ್ಯ ಕೃಷಿ ಸಚಿವರು ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ ತೊಗರಿ ಖರೀದಿ ಅವಧಿ ಇದೇ ಮಾರ್ಚ್ 31ಕ್ಕೆ ಅಂತ್ಯವಾಗಲಿದೆ. ಈ ಅವಧಿಯನ್ನು ಮೇ 15 ರವರೆಗೆ ವಿಸ್ತರಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ವಿಷಯವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.

