ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಭೇಟಿಯಾಗಲು ಅಭಿಮಾನಿಯೊಬ್ಬ ಮುಂಬೈನಿಂದ ಬೆಂಗಳೂರುವರೆಗೆ ಬರೋಬ್ಬರಿ ಒಂದು ಸಾವಿರ ಕಿಲೋಮೀಟರ್ಗಳಿಗೂ ಅಧಿಕ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿರುವ ಅಪರೂಪದ ಘಟನೆ ನಡೆದಿದೆ. ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ (CoE) ಗಾಯಾಳು ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಅವರನ್ನು ಈ ಅಭಿಮಾನಿ ಭೇಟಿಯಾಗಿದ್ದು, ಆಟಗಾರನ ಹೃದಯಸ್ಪರ್ಶಿ ವರ್ತನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಕ್ನೋ ಮೂಲದ ರವಿ ಎಂಬ ಅಭಿಮಾನಿ ಪ್ಲೇಕಾರ್ಡ್ ಹಿಡಿದುಕೊಂಡು ಮುಂಬೈನಿಂದ ಬೆಂಗಳೂರಿಗೆ ನಡೆದುಕೊಂಡು ಬಂದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ವಾಪಸ್ ಹೋಗಲು ರೈಲು ಟಿಕೆಟ್ ವ್ಯವಸ್ಥೆ ಮಾಡಿಸುವುದಾಗಿ ಭೇಟಿ ಮಾಡಿದ ಅಭಿಮಾನಿಗೆ ಹಾರ್ದಿಕ್ ಭರವಸೆ ನೀಡಿದ್ದಾರೆ. “ನಿನಗೆ ಬೇರೆ ಏನಾದರೂ ಸಹಾಯ ಬೇಕಾ? ನಾನು ನಿನ್ನ ಪರವಾಗಿ ಏನು ಮಾಡಲಿ?” ಎಂದು ಪ್ರೀತಿಯಿಂದ ಮಾತನಾಡಿಸಿರುವ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಹೊಸ ಗಾಯದ ಸಮಸ್ಯೆಯಿಂದ ಕ್ರಿಕೆಟ್ನಿಂದ ದೂರವಿರುವ ಹಾರ್ದಿಕ್: ಐಪಿಎಲ್ 2026ರ ಮೇ ತಿಂಗಳಲ್ಲಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಸದ್ಯ ಕ್ರಿಕೆಟ್ನಿಂದ ಹೊರಗುಳಿದಿದ್ದಾರೆ. ಬೌಲಿಂಗ್ ಮಾಡುವಾಗ ಇನ್ನೂ ಸಂಪೂರ್ಣ ನೋವು ನಿವಾರಣೆಯಾಗದ ಕಾರಣ ಅವರ ಕಂಬ್ಯಾಕ್ ವಿಳಂಬವಾಗಿದೆ. ಇದರಿಂದಾಗಿ ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಅವರು ಹೊರಗುಳಿದಿದ್ದು, ಫಿಟ್ನೆಸ್ ಸಾಬೀತುಪಡಿಸಲು ವಿಜಯ್ ಹಜಾರೆ ಅಥವಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊರೆ ಹೋಗಬೇಕಿದೆ.

