ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಗುರುವಾರ (ಜನವರಿ 22) ಬೆಳಗಿನ ಜಾವ ಖಾಸಗಿ ಬಸ್ ಮತ್ತು ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವವಾಗಿ ದಹನಗೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡು ಇಡೀ ಬಸ್ ಸುಟ್ಟು ಕರಕಲಾಗಿದ್ದು, ಘಟನೆಯ ಭಯಾನಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಂದ್ಯಾಲ್ ಜಿಲ್ಲೆಯಲ್ಲಿ ಜಿಲ್ಲೆಯ ಶಿರವೆಲ್ಲಾ ಮಂಡಲದ ಶಿರವೆಲ್ಲಾಮೆಟ್ಟ ಗ್ರಾಮದ ಬಳಿ ಬೆಳಗಿನ ಜಾವ 1 ರಿಂದ 2 ಗಂಟೆಯ ನಡುವೆ ಈ ದುರ್ಘಟನೆ ಸಂಭವಿಸಿದೆ.ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ ಮತ್ತು ಕಂಟೇನರ್ ಲಾರಿ ಬೆಂಕಿಗೆ ಆಹುತಿಯಾಗಿವೆ. ಬಸ್ಸಿನಿಂದ ಬೃಹತ್ ಬೆಂಕಿಯ ಜ್ವಾಲೆಗಳು ಹೊರಬರುತ್ತಿರುವ ವೀಡಿಯೊ ಆನ್ಲೈನ್ನಲ್ಲಿ ವೈರಲ್ ಆಗಿದೆ. ಬೆಂಕಿಗೆ ಸಿಲುಕಿ ಹಲವಾರು ಜನರು ಗಾಯಗೊಂಡಿದ್ದು, ವಾಹನಗಳ ಚಾಲಕರು ಮತ್ತು ಕಂಟೇನರ್ ಟ್ರಕ್ನ ಕ್ಲೀನರ್ ಸೇರಿ ಮೂವರು ಸುಟ್ಟು ಕರಕಲಾಗಿದ್ದಾರೆ.
ಅಪಘಾತಕ್ಕೆ ಇದೇ ಕಾರಣ.!
36 ಪ್ರಯಾಣಿಕರಿದ್ದ ಬಸ್ ನೆಲ್ಲೂರಿನಿಂದ ಹೈದರಾಬಾದ್ಗೆ ತೆರಳುತ್ತಿತ್ತು. ಬಸ್ ನ ಒಂದು ಟೈರ್ ಸ್ಫೋಟಗೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಡಿವೈಡರ್ ದಾಟಿ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡ ಕಾರಣ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು. ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪಾರಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಬಸ್ ಚಾಲಕ, ಅದರ ಕ್ಲೀನರ್ ಮತ್ತು ಲಾರಿ ಚಾಲಕ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

