ಇಂದಿನ ಡಿಜಿಟಲ್ ಯುಗದಲ್ಲಿ ಕೈಯಲ್ಲಿ ಫೋನ್ ಇಲ್ಲದೆ ಒಂದು ಕ್ಷಣವೂ ಕಳೆಯುವುದು ಕಷ್ಟ. ಆದರೆ, ನೀವು ಸ್ಟೈಲಿಶ್ ಆಗಿ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳುವ ಸ್ಮಾರ್ಟ್ಫೋನ್ ಮತ್ತು ತೊಡೆಯ ಮೇಲೆ ಇಟ್ಟು ಬಳಸುವ ಲ್ಯಾಪ್ಟಾಪ್ ನಿಮ್ಮ ತಂದೆಯಾಗುವ ಕನಸಿಗೆ ಅಡ್ಡಿಯಾಗಬಹುದು! ಮೊಬೈಲ್ನಿಂದ ಹೊರಬರುವ ರೇಡಿಯೋ ಫ್ರೀಕ್ವೆನ್ಸಿ ವಿಕಿರಣಗಳು ಮತ್ತು ಲ್ಯಾಪ್ಟಾಪ್ ಹೊರಸೂಸುವ ಅತಿಯಾದ ಶಾಖವು ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟವನ್ನು ಗಣನೀಯವಾಗಿ ಕುಂದಿಸುತ್ತಿವೆ ಎಂದು ಇತ್ತೀಚಿನ ಸಂಶೋಧನೆಗಳು ಎಚ್ಚರಿಸಿವೆ. ಸಂತಾನಹೀನತೆ ಸಮಸ್ಯೆಯಿಂದ ದೂರವಿರಲು ಪುರುಷರು ತಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ತುರ್ತು ಬದಲಾವಣೆಗಳ ಕುರಿತಾದ ವಿಶೇಷ ವರದಿ ಇಲ್ಲಿದೆ.
ಹೌದು. ಇಂದಿನ ಸಮಾಜದಲ್ಲಿ ವಿವಿಧ ಕಾರಣಗಳಿಂದಾಗಿ ಪುರುಷರಲ್ಲಿ ವೀರ್ಯಾಣುಗಳ ಗುಣಮಟ್ಟ (Sperm Quality) ಕಡಿಮೆಯಾಗುತ್ತಿದೆ, ಇದು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಂಪತಿಗಳು ಫರ್ಟಿಲಿಟಿ ಸೆಂಟರ್ಗಳ ಮೊರೆ ಹೋಗುವಂತಾಗಿದೆ. ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲು ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ಗಳ ಅತಿಯಾದ ಬಳಕೆಯೂ ಒಂದು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ವಿಕಿರಣ (Radiation) ಮತ್ತು ವೀರ್ಯದ ಆರೋಗ್ಯ
ಸ್ಮಾರ್ಟ್ಫೋನ್ಗಳು ಕೆಲಸ ಮಾಡುವಾಗ ರೇಡಿಯೋ ಫ್ರೀಕ್ವೆನ್ಸಿ ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಶನ್ (RF-EMR) ಅನ್ನು ಹೊರಸೂಸುತ್ತವೆ. ಪುರುಷರು ತಮ್ಮ ಫೋನ್ ಅನ್ನು ಪ್ಯಾಂಟ್ನ ಮುಂಭಾಗದ ಜೇಬಿನಲ್ಲಿ ಇಟ್ಟುಕೊಂಡಾಗ, ಅದು ಸಂತಾನೋತ್ಪತ್ತಿ ಅಂಗಗಳಿಗೆ ಅತ್ಯಂತ ಹತ್ತಿರದಲ್ಲಿರುತ್ತದೆ. ಸಂಶೋಧನೆಗಳ ಪ್ರಕಾರ, ಈ ವಿಕಿರಣದ ಪ್ರಭಾವದಿಂದಾಗಿ:
- ವೀರ್ಯಕಣಗಳ ಚಲನಶೀಲತೆ (Motility) ಕಡಿಮೆಯಾಗುತ್ತದೆ.
- ವೀರ್ಯಕಣಗಳ ಸಂಖ್ಯೆ (Count) ಕುಸಿಯುತ್ತದೆ.
- ಅವುಗಳ ಜೀವಶಕ್ತಿ (Viability) ಕುಂದುತ್ತದೆ. ಅಷ್ಟೇ ಅಲ್ಲದೆ, ಈ ವಿಕಿರಣವು ವೀರ್ಯಕಣಗಳಲ್ಲಿ ‘ಆಕ್ಸಿಡೇಟಿವ್ ಸ್ಟ್ರೆಸ್’ ಉಂಟುಮಾಡಿ DNA ಗೆ ಹಾನಿ ಮಾಡುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಶಾಖದ (Heat) ಪ್ರಭಾವ
ಪುರುಷರ ವೃಷಣಗಳು ಸಾಮಾನ್ಯ ದೇಹದ ಉಷ್ಣತೆಗಿಂತ ಸುಮಾರು 2 ರಿಂದ 4 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನದಲ್ಲಿದ್ದಾಗ ಮಾತ್ರ ಆರೋಗ್ಯಕರ ವೀರ್ಯಕಣಗಳನ್ನು ಉತ್ಪಾದಿಸಲು ಸಾಧ್ಯ.
- ಫೋನ್ ನಿರಂತರವಾಗಿ ಜೇಬಿನಲ್ಲಿ ಇರುವುದರಿಂದ, ಅದರಲ್ಲೂ ವಿಶೇಷವಾಗಿ ಫೋನ್ ಬಳಸುವಾಗ ಅಥವಾ ಚಾರ್ಜ್ ಆಗುವಾಗ ಹೊರಬರುವ ಶಾಖವು ಈ ತಾಪಮಾನವನ್ನು ಹೆಚ್ಚಿಸುತ್ತದೆ.
- ಈ ರೀತಿ ಅಸಹಜವಾಗಿ ತಾಪಮಾನ ಏರುವುದನ್ನು ‘ಸ್ಕ್ರೋಟಲ್ ಹೈಪರ್ ಥರ್ಮಿಯಾ’ ಎಂದು ಕರೆಯಲಾಗುತ್ತದೆ. ಇದು ವೀರ್ಯಾಣು ಉತ್ಪಾದನಾ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ.
ಲ್ಯಾಪ್ಟಾಪ್ ಬಳಕೆದಾರರೇ ಎಚ್ಚರ!
ಲ್ಯಾಪ್ಟಾಪ್ ಹೆಸರಿಗೆ ತಕ್ಕಂತೆ ‘ಲ್ಯಾಪ್’ (ತೊಡೆ) ಮೇಲೆ ಇಟ್ಟುಕೊಂಡು ಕೆಲಸ ಮಾಡುವುದು ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.
- ಲ್ಯಾಪ್ಟಾಪ್ನಿಂದ ಹೊರಬರುವ ಶಾಖ, ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ಸ್ ಮತ್ತು ವೈ-ಫೈ ವಿಕಿರಣಗಳು ಒಟ್ಟಾಗಿ ಪುರುಷರ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
- ಕೇವಲ 30 ನಿಮಿಷಗಳ ಕಾಲ ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಳ್ಳುವುದರಿಂದ ವೃಷಣಗಳ ಬಳಿ ಉಷ್ಣತೆ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
ತಜ್ಞರ ಸಲಹೆಗಳು:
- ಲ್ಯಾಪ್ಟಾಪ್ ಅನ್ನು ಯಾವಾಗಲೂ ಟೇಬಲ್ ಮೇಲೆ ಇಟ್ಟು ಬಳಸಿ ಅಥವಾ ಕೂಲಿಂಗ್ ಪ್ಯಾಡ್ ಬಳಸಿ.
- ಸ್ಮಾರ್ಟ್ಫೋನ್ಗಳನ್ನು ಬಿಗಿಯಾದ ಜೀನ್ಸ್ ಪ್ಯಾಂಟ್ನ ಮುಂಭಾಗದ ಜೇಬಿನಲ್ಲಿ ಇಟ್ಟುಕೊಳ್ಳಬೇಡಿ.
- ಫೋನ್ ಬಳಸದಿದ್ದಾಗ ಅದನ್ನು ದೇಹದಿಂದ ಸ್ವಲ್ಪ ದೂರದಲ್ಲಿಡುವುದು ಉತ್ತಮ.

