ಬೆಂಗಳೂರು: ಕೆಎಸ್ಆರ್ಟಿಸಿ ನೌಕರರಿಗೆ ಏಪ್ರಿಲ್ 30ರಂದು ವೇತನ ಪಾವತಿಗೆ ಆದೇಶ ಹೊರಡಿಸಲಾಗಿದೆ. ಕಾರ್ಮಿಕ ದಿನದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇರುವ ಕಾರಣ ಕೆಎಸ್ಆರ್ಟಿಸಿ ನೌಕರರಿಗೆ ಈ ಬಾರಿ ಏಪ್ರಿಲ್ 30ರಂದೇ ಮಾಸಿಕ ವೇತನ ಪಾವತಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಆದೇಶಿಸಿದ್ದಾರೆ.
ಸಾಮಾನ್ಯವಾಗಿ ಕೆಎಸ್ಆರ್ಟಿಸಿ ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖಿನಂದು ವೇತನ ಪಾವತಿಸಲಾಗುವುದು. ಆದರೆ ಮೇ ತಿಂಗಳ ಮೊದಲ ದಿನ ಕಾರ್ಮಿಕ ದಿನವಾಗಿರುವ ಕಾರಣದಿಂದ ಸರ್ಕಾರಿ ರಜೆ ಇದೆ. ಈ ದಿನದಂದು ಬ್ಯಾಂಕ್ ರಜೆ ಇರುವ ಕಾರಣ ಮತ್ತು ಕಾರ್ಮಿಕ ದಿನದ ಕೊಡುಗೆಯಾಗಿ ಏ. 30ರಂದೇ ನೌಕರರಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆಕ್ರಂ ಪಾಷಾ ಅವರು ಸೂಚನೆ ನೀಡಿದ್ದಾರೆ.

