ತೆಲಂಗಾಣ: ಸಾಲವಾಗಿ ನೀಡಿದ್ದ ರೂ.24 ಲಕ್ಷವನ್ನು ವಾಪಸ್ ನೀಡುತ್ತಿಲ್ಲ ಎಂದು ಆರೋಪಿಸಿ ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಕಳೆನಾಷಕ ಹಿಡಿದು ಸೆಲ್ಫೋನ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕರೀಂನಗರ ಜಿಲ್ಲೆಯ ಗಂಗಾಧರ ಮಂಡಲದ ಕುರಿಕ್ಯಾಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸಾಲವಾಗಿ ನೀಡಿದ್ದ ರೂ.24 ಲಕ್ಷವನ್ನು ವಾಪಸ್ ನೀಡುತ್ತಿಲ್ಲ ಎಂದು ಆರೋಪಿಸಿ ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕರೀಂನಗರ ಜಿಲ್ಲೆಯ ಗಂಗಾಧರ ಮಂಡಲದ ಕುರಿಕ್ಯಾಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ, ಕುರಿಕ್ಯಾಲ ಗ್ರಾಮದ ನಿವಾಸಿ ಕೊಮುರಯ್ಯ ಅವರು 2015ರಲ್ಲಿ ಗಂಗಾಧರ ಮಾಜಿ ಮಾರುಕಟ್ಟೆ ಸಮಿತಿ ಅಧ್ಯಕ್ಷರ ಪತಿ ಜಗಿರಪು ಶ್ರೀನಿವಾಸ್ ಅವರಿಗೆ ರೂ.24 ಲಕ್ಷ ಸಾಲವಾಗಿ ನೀಡಿದ್ದರು ಎನ್ನಲಾಗಿದೆ. ಆದರೆ, ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಕೊಮುರಯ್ಯ ಆರೋಪಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಕೈಯಲ್ಲಿ ಕಳೆನಾಷಕ ಹಿಡಿದು ಗ್ರಾಮದ ಸೆಲ್ಫೋನ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷಯ ಗಮನಿಸಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಕೊಮುರಯ್ಯ ಅವರನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ನಂತರ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲು ಪೊಲೀಸರು ಹಾಗೂ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ಮುಖಕ್ಕೆ ಕೇಕ್ ಹಚ್ಚಿದ್ದಕ್ಕೆ ಯುವಕನ ಕೊಲೆ
ಜಮ್ಮು: ಹುಟ್ಟುಹಬ್ಬದ ಸಂಭ್ರಮದ ವೇಳೆ ಮುಖಕ್ಕೆ ಕೇಕ್ ಹಚ್ಚಿದ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಜಮ್ಮುವಿನ ಲೋವರ್ ರೂಪನಗರ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.
ಜಮ್ಮುವಿನ ಲೋವರ್ ರೂಪನಗರದಲ್ಲಿ ಹುಟ್ಟುಹಬ್ಬದ ಪಾರ್ಟಿ ವೇಳೆ ಮುಖಕ್ಕೆ ಕೇಕ್ ಹಚ್ಚಿದ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಜಗಳ ಭೀಕರ ಘಟನೆಗೆ ತಿರುಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ಯುವಕನೊಬ್ಬನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದ್ದು, ಆತ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಅನುಷ್ ತನ್ನ ಸ್ನೇಹಿತರೊಂದಿಗೆ ರಸ್ತೆ ಬದಿಯಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದ. ಕೇಕ್ ಕತ್ತರಿಸುವ ವೇಳೆ ಸ್ನೇಹಿತ ಪವನ್ ನಾಯರ್ ಅಲಿಯಾಸ್ ಸಮೀರ್ ಅವರು ನೀರಜ್ ಮುಖಕ್ಕೆ ಕೇಕ್ ಹಚ್ಚಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತರು ಇಬ್ಬರನ್ನೂ ಸಮಾಧಾನಪಡಿಸಲು ಮುಂದಾದರೂ, ನೀರಜ್ ಕೋಪಗೊಂಡು ತನ್ನ ಬಳಿ ಇದ್ದ ಹರಿತವಾದ ಆಯುಧದಿಂದ ಪವನ್ ಅವರ ಕುತ್ತಿಗೆಗೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪವನ್ ಅವರನ್ನು ಸ್ನೇಹಿತರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆ ಕುರಿತು ಜಾನಿಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ನೀರಜ್ ಅಲಿಯಾಸ್ ಅನುಷ್ ಹಾಗೂ ಆತನ ಸಹೋದರ ರಿಷು ಅವರನ್ನು ಬಂಧಿಸಲಾಗಿದೆ. ಹಲ್ಲೆಗೆ ಬಳಸಲಾಗಿದೆ ಎನ್ನಲಾದ ಆಯುಧವನ್ನು ವಶಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ

