ನವದೆಹಲಿ: ಭಾರತದಲ್ಲಿ ಆ್ಯಪಲ್‌ನ ಹೊಸ iPhone 18 Pro ಮತ್ತು iPhone 18 Pro Max ಸ್ಮಾರ್ಟ್‌ಫೋನ್‌ಗಳ ಮಾರಾಟ ಆರಂಭವಾಗಿದ್ದು, ಮೊದಲ ದಿನವೇ ಗ್ರಾಹಕರಲ್ಲಿ ಭಾರಿ ಕ್ರೇಜ್ ಕಂಡುಬಂದಿದೆ. ದೇಶದ ಪ್ರಮುಖ ನಗರಗಳಲ್ಲಿರುವ ಆ್ಯಪಲ್ ಸ್ಟೋರ್‌ಗಳ ಮುಂದೆ ಮುಂಜಾನೆಯಿಂದಲೇ ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ಫೋನ್ ಖರೀದಿಸಲು ಕಾಯುತ್ತಿದ್ದರು.
ಈ ನಡುವೆ, ನೋಯ್ಡಾದ ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾದಲ್ಲಿರುವ ಆ್ಯಪಲ್ ಸ್ಟೋರ್ ಹೊರಗೆ ನಡೆದ ಎರಡು ಘಟನೆಗಳು ಗಮನ ಸೆಳೆದಿವೆ. ಪತ್ನಿಯ ಆಸೆ ಈಡೇರಿಸಲು ಚಿನ್ನ ಮಾರಾಟ ಮಾಡಿ ಐಫೋನ್ ಖರೀದಿಸಲು ಬಂದ ಪತಿಯೊಬ್ಬರ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://x.com/MeghUpdates/status/2100898006677520585
ಪತ್ನಿಗಾಗಿ ಚಿನ್ನ ಮಾರಿ ಐಫೋನ್ ಖರೀದಿ
ದೆಹಲಿ ಮೂಲದ ವ್ಯಕ್ತಿಯೊಬ್ಬರು ಮುಂಜಾನೆ 8 ಗಂಟೆಗೂ ಮುನ್ನವೇ ಆ್ಯಪಲ್ ಸ್ಟೋರ್‌ನ ಕ್ಯೂನಲ್ಲಿ ನಿಂತಿದ್ದರು. ತಮ್ಮ ಪತ್ನಿಗೆ ಬರ್ಗುಂಡಿ ಬಣ್ಣದ iPhone 18 Pro ಬೇಕೆಂದು ಹೇಳಿದ್ದರಿಂದ ಅದನ್ನು ಖರೀದಿಸಲು ಬಂದಿರುವುದಾಗಿ ಅವರು ತಿಳಿಸಿದರು.
ತಮ್ಮ ಪತ್ನಿ ಇದುವರೆಗೆ ಐಫೋನ್ ಬಳಸಿರಲಿಲ್ಲ. ಈ ಬಾರಿ ಫೋನ್ ಖರೀದಿಸಲು ತಮ್ಮ ಬಳಿ ಸಾಕಷ್ಟು ಹಣವಿಲ್ಲದ ಕಾರಣ, ಮನೆಯಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ಹಣ ಹೊಂದಿಸಿದ್ದಾಗಿ ಅವರು ಹೇಳಿದ್ದಾರೆ.
ಭಾವಿ ಪತ್ನಿಗೆ ₹3.5 ಲಕ್ಷದ ಐಫೋನ್
ಇದೇ ವೇಳೆ, ಪಂಜಾಬ್‌ನಿಂದ ನೋಯ್ಡಾಗೆ ಬಂದಿದ್ದ ಗುರ್ದಿತಾ ಸಿಂಗ್ ಎಂಬ ಯುವಕ ಕೂಡ ಗಮನ ಸೆಳೆದಿದ್ದಾರೆ. ಮದುವೆಯಾಗಲಿರುವ ತಮ್ಮ ಭಾವಿ ಪತ್ನಿಗೆ ಉಡುಗೊರೆಯಾಗಿ iPhone 18 Pro ಖರೀದಿಸಲು ಬಂದಿದ್ದಾಗಿ ಅವರು ಹೇಳಿದ್ದಾರೆ.
ತಮ್ಮ ಮತ್ತು ಭಾವಿ ಪತ್ನಿಗಾಗಿ ಒಟ್ಟು ₹3.5 ಲಕ್ಷ ವೆಚ್ಚದಲ್ಲಿ ಐಫೋನ್‌ಗಳನ್ನು ಖರೀದಿಸಿರುವುದಾಗಿ ಗುರ್ದಿತಾ ಸಿಂಗ್ ತಿಳಿಸಿದ್ದಾರೆ.ಈ ಬಾರಿ ಹೊಸ ಐಫೋನ್‌ಗಳ ಬೆಲೆ ಹೆಚ್ಚಾಗಿದ್ದರೂ ಗ್ರಾಹಕರ ಉತ್ಸಾಹದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ನೋಯ್ಡಾ ಸೇರಿದಂತೆ ಹಲವು ನಗರಗಳ ಆ್ಯಪಲ್ ಸ್ಟೋರ್‌ಗಳ ಮುಂದೆ ಮುಂಜಾನೆಯಿಂದಲೇ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಪ್ರಿ-ಆರ್ಡರ್ ಮಾಡಿದ್ದ ಗ್ರಾಹಕರಿಗೆ ಸ್ಟೋರ್ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ನೇರವಾಗಿ ಬಂದ ಕೆಲ ಗ್ರಾಹಕರಿಗೆ ತಕ್ಷಣ ಫೋನ್ ಖರೀದಿಸಲು ಅವಕಾಶ ಸಿಗಲಿಲ್ಲ ಎಂದು ವರದಿಯಾಗಿದೆ.
ಭಾರತದಲ್ಲಿ iPhone 18 Pro ಸರಣಿಯ ಆರಂಭಿಕ ಬೆಲೆ ₹1,64,900 ಆಗಿದ್ದು, iPhone 18 Pro Max 2TB ಮಾದರಿಯ ಬೆಲೆ ₹3,29,900 ವರೆಗೆ ಇದೆ. ಹೆಚ್ಚಿನ ಬೆಲೆಯ ನಡುವೆಯೂ ಹೊಸ ಐಫೋನ್‌ಗಾಗಿ ಗ್ರಾಹಕರು ತೋರಿದ ಉತ್ಸಾಹ ಆ್ಯಪಲ್ ಉತ್ಪನ್ನಗಳ ಮೇಲಿನ ಬೇಡಿಕೆಯನ್ನು ಮತ್ತೊಮ್ಮೆ ತೋರಿಸಿದೆ.

