HomeLatest Newsಟೀನೇಜರ್‌ಗಳ ಓದುವ ಸಾಮರ್ಥ್ಯದಲ್ಲಿ ಭಾರಿ ಕುಸಿತ; 10 ವರ್ಷದಲ್ಲಿ 28 ಅಂಕ ಇಳಿಕೆ : ವರದಿ

ಟೀನೇಜರ್‌ಗಳ ಓದುವ ಸಾಮರ್ಥ್ಯದಲ್ಲಿ ಭಾರಿ ಕುಸಿತ; 10 ವರ್ಷದಲ್ಲಿ 28 ಅಂಕ ಇಳಿಕೆ : ವರದಿ

ಡಿಜಿಟಲ್ ಯುಗದಲ್ಲಿ ಮಾಹಿತಿ ಪಡೆಯುವುದು ಹಿಂದೆಂದಿಗಿಂತಲೂ ಸುಲಭವಾಗಿದೆ. ಸ್ಮಾರ್ಟ್‌ಫೋನ್, ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್‌ನೆಟ್‌ ಮೂಲಕ ಯಾವುದೇ ವಿಷಯದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು.

ಆದರೆ ವೇಗವಾಗಿ ಮಾಹಿತಿ ಪಡೆಯುತ್ತಿರುವ ಯುವಜನರು ವಿಷಯವನ್ನು ಆಳವಾಗಿ ಓದುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆಯೇ? ಓದಿದ ವಿಷಯವನ್ನು ವಿಶ್ಲೇಷಿಸುವುದು, ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸುವುದು ಹಾಗೂ ವಿಮರ್ಶಾತ್ಮಕವಾಗಿ ಆಲೋಚಿಸುವ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇ? ಇತ್ತೀಚೆಗೆ ಬಿಡುಗಡೆಯಾದ PISA-2025 ಫಲಿತಾಂಶಗಳು ಇದಕ್ಕೆ ಹೌದು ಎಂಬ ಉತ್ತರ ನೀಡಿವೆ.

PISA-2025 ವರದಿಯ ಪ್ರಕಾರ, 15 ವರ್ಷದ ವಿದ್ಯಾರ್ಥಿಗಳ ಓದುವ ಸಾಮರ್ಥ್ಯದಲ್ಲಿ ಕಳೆದ ಒಂದು ದಶಕದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. OECD ದೇಶಗಳಲ್ಲಿ 2015ರಿಂದ 2025ರ ನಡುವೆ ಓದುವ ಸ್ಕೋರ್ 28 ಅಂಕಗಳಷ್ಟು ಇಳಿಕೆಯಾಗಿದೆ, ಇದು ವಿದ್ಯಾರ್ಥಿಗಳ ಕಲಿಕೆಯ ಮಟ್ಟದ ಬಗ್ಗೆ ಆತಂಕ ಮೂಡಿಸಿದೆ. ಡಿಜಿಟಲ್ ಯುಗದಲ್ಲಿ ಬೆಳೆಯುತ್ತಿರುವ ಟೀನೇಜರ್‌ಗಳಲ್ಲಿ ಓದುವ ಹಾಗೂ ಓದಿದ್ದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕುಸಿಯುತ್ತಿದೆ ಎಂಬ ಆತಂಕಕಾರಿ ಸಂಗತಿ ಅಧ್ಯಯನದಿಂದ ಹೊರಬಿದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಧ್ಯಯನದಲ್ಲಿ ಹೊರಬಂದ ಆಘಾತಕಾರಿ ಸಂಗತಿಗಳು

ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್‌ಮೆಂಟ್ (OECD) ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸುವ PISA ಅಧ್ಯಯನ, 15 ವರ್ಷದ ವಿದ್ಯಾರ್ಥಿಗಳ ಓದು, ಗಣಿತ ಮತ್ತು ವಿಜ್ಞಾನ ವಿಷಯಗಳ ಸಾಮರ್ಥ್ಯವನ್ನು ಅಳೆಯುತ್ತದೆ.

ಇತ್ತೀಚಿನ PISA-2025 ಅಧ್ಯಯನವನ್ನು 91 ದೇಶಗಳು ಮತ್ತು ಆರ್ಥಿಕ ವ್ಯವಸ್ಥೆಗಳ 7.60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ನಡೆಸಲಾಗಿದೆ.ಅಧ್ಯಯನದ ಫಲಿತಾಂಶದಲ್ಲಿ ಹಲವು ಆತಂಕಕಾರಿ ಅಂಶಗಳು ಬಹಿರಂಗವಾಗಿವೆ. ಕಳೆದ ಒಂದು ದಶಕದಲ್ಲಿ, ಅಂದರೆ 2015ರಿಂದ 2025ರವರೆಗೆ ಮಕ್ಕಳ ಓದಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ 28 ಅಂಕಗಳಷ್ಟು ಕುಸಿದಿದೆ.

ಇದೇ ಅವಧಿಯಲ್ಲಿ ಗಣಿತದ ಅಂಕಗಳು 22 ಪಾಯಿಂಟ್‌ಗಳಷ್ಟು ಕಡಿಮೆಯಾಗಿವೆ. ಆದರೆ ಗಣಿತ ಮತ್ತು ವಿಜ್ಞಾನಕ್ಕೆ ಹೋಲಿಸಿದರೆ ಓದುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯದಲ್ಲಿ ಹೆಚ್ಚು ತೀವ್ರ ಕುಸಿತ ಕಂಡುಬಂದಿದೆ.2015ರಲ್ಲಿ ಸರಾಸರಿ ಓದುವ ಸ್ಕೋರ್ 489 ಅಂಕಗಳಿದ್ದರೆ, 2025ರಲ್ಲಿ ಅದು 461 ಅಂಕಗಳಿಗೆ ಇಳಿಕೆಯಾಗಿದೆ.

ಒಂದು ವರ್ಷದ ಓದು ಹಿಂದೆ ಬಿದ್ದರೇ?

2018ರಿಂದ 2025ರ ನಡುವೆ ಓದುವ ಸ್ಕೋರ್‌ನಲ್ಲಿ 25 ಅಂಕಗಳ ಕುಸಿತ ಕಂಡುಬಂದಿದೆ. ಇದನ್ನು ಆಧರಿಸಿ ನೋಡಿದರೆ, ಮಕ್ಕಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸುಮಾರು ಒಂದು ಪೂರ್ಣ ಶೈಕ್ಷಣಿಕ ವರ್ಷದ ಕಲಿಕೆಯನ್ನು ಕಳೆದುಕೊಂಡಂತಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕನಿಷ್ಠ ಮಟ್ಟದಲ್ಲಿ ಓದಲು ಸಾಧ್ಯವಾಗದ ವಿದ್ಯಾರ್ಥಿಗಳ ಪ್ರಮಾಣವೂ ಆತಂಕಕಾರಿಯಾಗಿದೆ. ಕಳೆದ ಒಂದು ದಶಕದಲ್ಲಿ ಕನಿಷ್ಠ Level-2 ಓದುವ ಸಾಮರ್ಥ್ಯ ಹೊಂದಿರದ ಮಕ್ಕಳ ಸಂಖ್ಯೆ ಶೇ.10ರಷ್ಟು ಹೆಚ್ಚಾಗಿದೆ. ಇದೇ ವೇಳೆ ಓದಿನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಟಾಪ್ ಪರ್ಫಾರ್ಮರ್‌ಗಳ ಸಂಖ್ಯೆ ಶೇ.2ರಷ್ಟು ಕುಸಿದಿದೆ.

ಕೊರೋನಾ ಮಾತ್ರ ಕಾರಣವಲ್ಲ!

ವಿದ್ಯಾರ್ಥಿಗಳ ಓದುವ ಸಾಮರ್ಥ್ಯ ಕುಸಿತಕ್ಕೆ ಕೇವಲ ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳನ್ನು ಕಾರಣವೆಂದು ಹೇಳಲು ಸಾಧ್ಯವಿಲ್ಲ ಎಂದು ಅಧ್ಯಯನ ತಿಳಿಸಿದೆ. ಈ ಸಮಸ್ಯೆ ಕೊರೋನಾ ಪೂರ್ವದಲ್ಲೇ ಆರಂಭವಾಗಿತ್ತು ಎಂದು ವರದಿ ಸೂಚಿಸಿದೆ.

ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಅತಿಯಾದ ಸ್ಕ್ರೀನ್ ಟೈಮ್ ಹೆಚ್ಚಾಗಿರುವುದರಿಂದ ಮಕ್ಕಳ ಏಕಾಗ್ರತೆಯ ಅವಧಿ ಗಣನೀಯವಾಗಿ ಕಡಿಮೆಯಾಗಿದೆ. ಹೆಚ್ಚು ಪುಟಗಳಿರುವ ಪುಸ್ತಕಗಳು ಅಥವಾ ದೀರ್ಘ ಲೇಖನಗಳನ್ನು ತಾಳ್ಮೆಯಿಂದ ಓದುವ ಅಭ್ಯಾಸವೂ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ ವಿಷಯವನ್ನು ಆಳವಾಗಿ ಓದಿ ಅರ್ಥಮಾಡಿಕೊಳ್ಳುವ ಬದಲು, ಆತುರವಾಗಿ ಮೇಲ್ಮೈಯಲ್ಲಿ ಓದಿ ಮುಗಿಸುವ ‘ಹೇಸ್ಟಿ ರೀಡರ್ಸ್’ ಸಂಖ್ಯೆ ಹೆಚ್ಚಾಗಿದೆ.

2018ರಲ್ಲಿ ಇಂತಹ ಓದುಗರ ಪ್ರಮಾಣ ಶೇ.6.6ರಷ್ಟಿದ್ದರೆ, 2025ರಲ್ಲಿ ಅದು ಶೇ.11.4ಕ್ಕೆ ಏರಿಕೆಯಾಗಿದೆ.ಗೂಗಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣ ಮಾಹಿತಿ ಹುಡುಕುವ ಅಭ್ಯಾಸ ಮಕ್ಕಳಲ್ಲಿ ಹೆಚ್ಚಾಗಿದೆ. ಆದರೆ ಸಿಕ್ಕ ಮಾಹಿತಿಯಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎಂಬುದನ್ನು ವಿಶ್ಲೇಷಿಸುವ ವಿಮರ್ಶಾತ್ಮಕ ಚಿಂತನಾ ಸಾಮರ್ಥ್ಯ ಮಾತ್ರ ಕುಸಿಯುತ್ತಿದೆ ಎಂದು ಅಧ್ಯಯನ ಎಚ್ಚರಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular