ಬೆಂಗಳೂರು: ರಾಜ್ಯದ ಹಲವೆಡೆ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿಗಷ್ಟೆ ನೂರಾರು ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ದೇಶದ ಭದ್ರತೆಯ ಹಿತದೃಷ್ಟಿಯಿಂದ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಅಕ್ರಮ ವಲಸಿಗರ ಪತ್ತೆ ಹಾಗೂ ನಿಯಂತ್ರಣಕ್ಕಾಗಿ 3 ತಿಂಗಳ ಒಳಗೆ ಜಿಲ್ಲಾಮಟ್ಟದ ವಿಶೇಷ ಸಮಿತಿಗಳನ್ನು ರಚಿಸಿ ಕಾರ್ಯಾರಂಭ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದ್ದು, ಅಕ್ರಮ ವಲಸೆಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ರಾಷ್ಟ್ರೀಯ ಭದ್ರತೆಗೆ ಅಪಾಯ ತರಬಹುದು ಎಂದು ಎಚ್ಚರಿಸಿದೆ. ಜೊತೆಗೆ, ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪ್ರಮಾಣಿತ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ಬೆಂಗಳೂರಿನ ವೈದ್ಯ ಡಾ. ಟಿ. ನಾಗೇಂದ್ರಪ್ಪ ಎಂಬುವವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ನಡೆಸುವಾಗ ಹೈಕೋರ್ಟ್ ಈ ಕಠಿಣ ಆದೇಶ ನೀಡಿದೆ. ಡಾ. ನಾಗೇಂದ್ರಪ್ಪ ಅವರು ಶಂಕಿತ ಬಾಂಗ್ಲಾದೇಶಿ ಅಕ್ರಮ ವಲಸಿಗರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ವರದಿ ಮತ್ತು ಕಾಲಾನುಕ್ರಮದ ಘಟನೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವೈದ್ಯರ ವಿರುದ್ಧ ಪ್ರತೀಕಾರದ ರೀತಿಯಲ್ಲಿ ದೂರು ದಾಖಲಿಸಿರುವುದನ್ನು ಗಮನಿಸಿತು. ಹೀಗಾಗಿ ವೈದ್ಯರ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸಿದ ಹೈಕೋರ್ಟ್, ಅಕ್ರಮಗಳ ಬಗ್ಗೆ ಮಾಹಿತಿ ನೀಡುವವರ ವಿರುದ್ಧ ಕಾನೂನನ್ನು ಅಸ್ತ್ರವಾಗಿ ಬಳಸಬಾರದು ಎಂದು ಸ್ಪಷ್ಟಪಡಿಸಿತು.
ಯಾವುದೇ ಅಕ್ರಮ ವಲಸಿಗ ಪತ್ತೆಯಾದ ತಕ್ಷಣ, ನಿಯಮಿತ ಗಡಿಪಾರು ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು ಅವರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾಶಾಸ್ತ್ರದ ವಿವರಗಳನ್ನು ನಿಖರವಾಗಿ ದಾಖಲಿಸಿಕೊಳ್ಳುವುದು ಕಡ್ಡಾಯ. ನಿಗದಿತ ಮೂರು ತಿಂಗಳ ಗಡುವು ಮುಗಿದ ನಂತರ, ಈ ಆದೇಶದ ಜಾರಿಯ ಕುರಿತು ಜಿಲ್ಲಾವಾರು ಸಮಗ್ರ ಅನುಸರಣಾ ವರದಿಯನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ಕೆ.ಪಿ.ಎಸ್.ಸಿ ಬಳಿಕ ಇದೀಗ ಕೆ.ಎಸ್.ಒ.ಯು ಸರದಿ: ಪದವಿ, ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಮಾಡಲು ಅವಕಾಶ: ಪರೀಕ್ಷೆ ಬಳಿಕ ಹಣ ವಸೂಲಿ
ಶಿವಮೊಗ್ಗ: ಕೆ.ಪಿ.ಎಸ್.ಸಿ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮ ತನಿಖೆ ಹಂತದಲ್ಲಿರುವಾಗಲೇ ಮತ್ತೊಂದು ಪರೀಕ್ಷಾ ಅಕ್ರಮ ಬೆಳಕಿಗೆ ಬಾಂದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕಚೇರಿಯಲ್ಲಿ ಪರೀಕ್ಷೆಯಲ್ಲಿ ಮಾಸ್ ಕಾಪಿಗೆ ಅವಕಾಶ ನೀಡಲಾಗಿದೆ.
ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಸಮೀಪವಿರುವ ಕೆ.ಎಸ್.ಓ.ಯು ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪರೀಕ್ಷೆಗಳು ನಡೆಯುತ್ತಿದೆ. ಈ ವೇಳೆ ಸಾಮೂಹಿಕ ನಕಲು ಮಾಡಲು ಅವಕಾಶ ನೀಡಲಾಗಿದೆ. ಅಕ್ಟೋಬರ್ 7ರಿಂದ ಆರಂಭವಾಗಿರುವ ಮುಕ್ತ ವಿವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳು ನವೆಂಬರ್ 20ರವರೆಗೆ ನಡೆಯಲಿವೆ.
ಹಣ ಕೊಟ್ಟರೇ ಮೊಬೈಲ್, ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಕೆ.ಎಸ್.ಓ.ಯು ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ನೇತೃತ್ವದಲ್ಲಿ ಹಣ ಪಡೆದು ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಹಣ ಕೊಟ್ಟು ಪರೀಕ್ಷೆಯನ್ನು ಹೇಗೆ ಬೇಕಾದರೂ ಬರೆಯಬಹುದು, ಹಣ ಕೊಟ್ಟವರಿಗೆ ಪುಸ್ತಕ ಮತ್ತು ಮೊಬೈಲ್ ಇಟ್ಟುಕೊಂಡೇ ಪರೀಕ್ಷೆ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಣ ನೀಡಿದವರಿಗೆ ಎರಡನೇ ಫ್ಲೋರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಹಣ ನೀಡದವರಿಗೆ ಮೊದಲ ಫ್ಲೋರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತಿದೆ.
ವಿದ್ಯಾರ್ಥಿಗಳು ಪುಸ್ತಕ ಹಾಗೂ ಮೊಬೈಲ್ ನೋಡಿ ಪರೀಕ್ಷೆ ಬರೆಯುತ್ತಿರುವ ಸಾಮೂಹಿಕ ನಕಲು ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸಿಬ್ಬಂದಿಯನ್ನು ಮುಂದೆ ಬಿಟ್ಟು ಹಣ ಸಂಗ್ರಹಿಸಿ, ಮುಕ್ತವಾಗಿ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ.
ಪರೀಕ್ಷೆ ಆರಂಭವಾದ ಅರ್ಧ ಗಂಟೆ ಬಳಿಕ ವಿದ್ಯಾರ್ಥಿಗಳ ಲೆಕ್ಕ ಮಾಡಲು ಪ್ರಾದೇಶಿಕ ನಿರ್ದೇಶಕ ಸ್ವಾಮಿ ಅವರು ಬರುತ್ತಿದ್ದರು. ಅದೇ ಸಮಯದಲ್ಲಿ ಪರೀಕ್ಷಾ ಕೇಂದ್ರದ ಪ್ರತ್ಯೇಕ ಕೊಠಡಿಯಲ್ಲಿ ಖುದ್ದಾಗಿ ನಿಂತು ಅವರು ಸಾಮೂಹಿಕ ನಕಲು ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಳಿಕ ಎಸ್ ಡಿಸಿಗಳಾದ ವಿನಯಾ ಕೆ.ಜೆ., ನಿಂಗಾ ನಾಯ್ಕ್, ಅಟೆಂಡರ್ ಯೋಗೇಶ್ ಗೌಡ ಹಾಗೂ ಡಾಟಾ ಎಂಟ್ರಿ ಆಪರೇಟರ್ ಹರೀಶ್ ಅವರನ್ನು ಮುಂದೆ ಬಿಟ್ಟು ಹಣ ವಸೂಲಿ ಮಾಡಿಸಲಾಗುತ್ತದೆ.
ಒಂದು ವಿಷಯಕ್ಕೆ ಒಂದು ಸಾವಿರ ರೂ.ನಂತೆ ಓರ್ವ ವಿದ್ಯಾರ್ಥಿಯಿಂದ ಹಣ ವಸೂಲಿ ಮಾಡುತ್ತಿರುವ ಆರೋಪವಿದ್ದು, ಪ್ರತಿನಿತ್ಯ 70 ರಿಂದ 100 ವಿದ್ಯಾರ್ಥಿಗಳ ಬಳಿ ಪರೀಕ್ಷೆ ಮುಗಿದ ಬಳಿಕ ಹಣ ವಸೂಲಿ ಮಾಡಲಾಗುತ್ತಿದೆ. ಪರೀಕ್ಷೆ ಬರೆದ ನಂತರ ಅಲ್ಲೇ ವಿದ್ಯಾರ್ಥಿಗಳಿಂದ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

