HomeIndiaʼಅಪ್ಪ ನನಗೇನೂ ತರೋದಿಲ್ವʼ ; ಆಟೋ ಚಾಲಕನ ಕಣ್ಣೀರ ಕಥೆಗೆ ಕರಗಿ ಮಗನ ಮುಖದಲ್ಲಿ ಮಂದಹಾಸ...

ʼಅಪ್ಪ ನನಗೇನೂ ತರೋದಿಲ್ವʼ ; ಆಟೋ ಚಾಲಕನ ಕಣ್ಣೀರ ಕಥೆಗೆ ಕರಗಿ ಮಗನ ಮುಖದಲ್ಲಿ ಮಂದಹಾಸ ತರಿಸಿದ ಕಾಲೇಜು ವಿದ್ಯಾರ್ಥಿನಿ !

ದೈನಂದಿನ ಧಾವಂತದ ಬದುಕಿನಲ್ಲಿ ನಾವು ಎಷ್ಟೋ ಜನರ ಕಷ್ಟ, ನೋವುಗಳನ್ನು ಗಮನಿಸದೆ ಸಾಗುತ್ತೇವೆ. ಆದರೆ ಇಲ್ಲೊಬ್ಬ ಯುವತಿ ತಾನು ಪ್ರಯಾಣಿಸುತ್ತಿದ್ದ ಆಟೋ ಚಾಲಕನ ಅಸಹಾಯಕತೆಯನ್ನು ಅರಿತು, ಆತನ ಮುಖದಲ್ಲಿ ನಗು ಮೂಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಾಲೇಜು ವಿದ್ಯಾರ್ಥಿನಿ ತನ್ವಿ ಚಂದ್ರ ಎಂಬುವರು ತೋರಿದ ಈ ಸಣ್ಣ ಪ್ರೀತಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಹೃದಯ ಗೆಲ್ಲುತ್ತಿದೆ.

ತನ್ವಿ ಚಂದ್ರ ಎಂದಿನಂತೆ ಆಟೋದಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ರಸ್ತೆಯ ಸಂಚಾರ ದೀಪದ ಬಳಿ ವಾಹನ ನಿಂತಿತ್ತು. ಈ ವೇಳೆ ಬೀದಿಬದಿಯ ವ್ಯಾಪಾರಿಯೊಬ್ಬ ದೊಡ್ಡ ಆಟಿಕೆ ಕಾರುಗಳು ಮತ್ತು ಸಣ್ಣ ಟ್ರ್ಯಾಕ್ಟರ್‌ಗಳನ್ನು ಹಿಡಿದು ಮಾರಾಟ ಮಾಡಲು ಆಟೋದ ಬಳಿ ಬಂದಿದ್ದಾನೆ. ಮೊದಲು ಆ ವ್ಯಾಪಾರಿ ಯುವತಿಯ ಬಳಿ ಆಟಿಕೆ ಕೊಳ್ಳುವಂತೆ ಕೇಳಿದ್ದಾನೆ. ತನಗೆ ಬೇಡವೆಂದು ಆಕೆ ನಯವಾಗಿಯೇ ನಿರಾಕರಿಸಿದ್ದಾರೆ. ಆದರೆ, ಅದೇ ಹೊತ್ತಿಗೆ ಆಟೋ ಚಾಲಕನ ಕಣ್ಣುಗಳು ಆ ಆಟಿಕೆಗಳ ಮೇಲೆ ಬಿದ್ದಿವೆ. ತನ್ನ ಮುದ್ದಿನ ಮಗನ ನೆನಪಾಗಿ, ಚಾಲಕ ಕುತೂಹಲದಿಂದ ಆ ಆಟಿಕೆಯ ಬೆಲೆ ಎಷ್ಟು ಎಂದು ಮಾರಾಟಗಾರನನ್ನು ವಿಚಾರಿಸಿದ್ದಾನೆ.

ಆಟಿಕೆಗೆ ಐನೂರ ಐವತ್ತು ರೂಪಾಯಿ ಎಂದು ವ್ಯಾಪಾರಿ ಹೇಳಿದ ಬೆಲೆಯನ್ನು ಕೇಳುತ್ತಿದ್ದಂತೆ ಚಾಲಕನ ಮುಖದಲ್ಲಿ ನಿರಾಸೆ ಮೂಡಿದೆ. ಬಡತನ ಹಾಗೂ ದಿನದ ದುಡಿಮೆಯ ಲೆಕ್ಕಾಚಾರದ ಮುಂದೆ ಆ ದುಬಾರಿ ಆಟಿಕೆ ಕೊಳ್ಳಲು ಆತನ ಕೈಯಲ್ಲಿ ಸಾಧ್ಯವಾಗಲಿಲ್ಲ. ಸುಮ್ಮನೆ ಬೇಡ ಎಂದು ತಲೆಯಾಡಿಸಿ ಆತ ಮೌನವಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಾಲಕನ ಕಣ್ಣಂಚಿನ ನಿರಾಶೆಯನ್ನು ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ತನ್ವಿ ಗಮನಿಸಿದ್ದಾರೆ. ನಾವು ಪ್ರತಿದಿನ ಹೊರಗಿನ ಊಟ, ತಿಂಡಿ ಅಥವಾ ಆನ್‌ಲೈನ್ ಮೂಲಕ ತರಿಸಿಕೊಳ್ಳುವ ಆಹಾರಕ್ಕಾಗಿ ಯೋಚನೆಯೇ ಮಾಡದೆ ನೂರಾರು ರೂಪಾಯಿಗಳನ್ನು ಸುಲಭವಾಗಿ ಖರ್ಚು ಮಾಡುತ್ತೇವೆ. ಆದರೆ ಒಬ್ಬ ತಂದೆಗೆ ತನ್ನ ಮಗನ ಪುಟ್ಟ ಆಸೆಯನ್ನು ಈಡೇರಿಸಲು ಈ ಹಣ ದೊಡ್ಡ ಹೊರೆಯಾಗಿದೆ ಎಂಬ ಆಲೋಚನೆ ಯುವತಿಯ ಮನಸ್ಸಿನಲ್ಲಿ ತಕ್ಷಣವೇ ಮೂಡಿದೆ. ತಡಮಾಡದೆ ಆ ವ್ಯಾಪಾರಿಯನ್ನು ಕರೆದ ಯುವತಿ, ಚೌಕಾಶಿ ಮಾಡಿ ನಾಲ್ಕುನೂರ ಐವತ್ತು ರೂಪಾಯಿಗೆ ಆ ಆಟಿಕೆ ಕಾರನ್ನು ತಾವೇ ಕೊಂಡುಕೊಂಡು ಚಾಲಕನ ಕೈಗಿತ್ತಿದ್ದಾರೆ.

ಯುವತಿಯ ಈ ಅನಿರೀಕ್ಷಿತ ಸಹಾಯಕ್ಕೆ ಆಟೋ ಚಾಲಕ ಭಾವುಕನಾಗಿದ್ದಾನೆ. ಯಾವುದೇ ದೊಡ್ಡ ಧನ್ಯವಾದಗಳನ್ನು ಹೇಳುವ ಬದಲಿಗೆ, ಆತ ತನ್ನ ಕುಟುಂಬದ ಪರಿಸ್ಥಿತಿಯನ್ನು ಯುವತಿಯೊಂದಿಗೆ ಹಂಚಿಕೊಂಡಿದ್ದಾನೆ. ಮನೆಗೆ ಹೋದಾಗಲೆಲ್ಲ ನನ್ನ ಮಗ, ಅಪ್ಪಾ ನೀನು ನನಗಾಗಿ ಎಂದಿಗೂ ಏನನ್ನೂ ತರುವುದೇ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಿದ್ದ ಎಂಬ ಚಾಲಕನ ಮಾತು ಯುವತಿಯ ಹೃದಯವನ್ನು ಕಲಕಿದೆ. ಚಾಲಕ ತನ್ನ ಮೊಬೈಲ್‌ನಲ್ಲಿದ್ದ ಕುಟುಂಬದ ಮತ್ತು ಮಗನ ಭಾವಚಿತ್ರಗಳನ್ನು ತೋರಿಸಿ ಸಂಭ್ರಮಿಸಿದ್ದಾನೆ.

ಈ ಇಡೀ ಅನುಭವವನ್ನು ಯುವತಿ ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನು ಈವರೆಗೆ ಮಾಡಿರುವ ಖರ್ಚುಗಳಲ್ಲೇ ಇದು ಅತ್ಯಂತ ತೃಪ್ತಿ ತಂದ ಕ್ಷಣ ಎಂದು ಬರೆದುಕೊಂಡಿದ್ದಾರೆ. ಆಟಿಕೆ ಕಾರು ಪಡೆಯುವ ಮಗನ ಮುಖದಲ್ಲಿ ಅರಳುವ ಸಂತೋಷವನ್ನು ಊಹಿಸಿಕೊಂಡು ಯುವತಿ ನೆಮ್ಮದಿ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ನೋಡಿದ ನೆಟ್ಟಿಗರು ಯುವತಿಯ ಸಹೃದಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, ಇತರರಿಗೆ ನೆರವಾಗಲು ದೊಡ್ಡ ಶ್ರೀಮಂತಿಕೆ ಬೇಕಿಲ್ಲ, ಮಿಡಿಯುವ ಹೃದಯವಿದ್ದರೆ ಸಾಕು ಎಂದು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular