ಪುಣೆ: ಇಂದಿನ ದಿನಗಳಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಸಿಗುವುದೇ ದೊಡ್ಡ ವಿಷಯ ಎಂಬಂತಾಗಿದೆ. ಇನ್ನು ಕೈತುಂಬಾ ಸಂಬಳ ಸಿಗುವ ಆಫರ್ ಬಂದರೆ ಯಾರೂ ಕೂಡ ಬೇಡ ಎನ್ನುವುದಿಲ್ಲ. ಆದರೆ ಪುಣೆಯ ಇಂಜಿನಿಯರಿಂಗ್ ಮ್ಯಾನೇಜರ್ ಒಬ್ಬರು ಬರೋಬ್ಬರಿ 47 ಲಕ್ಷ ರೂಪಾಯಿ ವಾರ್ಷಿಕ ವೇತನದ (LPA) ಉದ್ಯೋಗದ ಆಫರ್ ಅನ್ನು ತಿರಸ್ಕರಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ವನೇಶ್ ಮಾಲಿ ಎಂಬ ಈ ಟೆಕ್ಕಿಯ ನಿರ್ಧಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ವನೇಶ್ ಮಾಲಿ ಅವರಿಗೆ ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಹಿರಿಯ ಹುದ್ದೆಗೆ ಈ ಭಾರಿ ಮೊತ್ತದ ಆಫರ್ ಬಂದಿತ್ತು. ಕಂಪನಿ ಕೂಡ ಉತ್ತಮವಾಗಿತ್ತು ಮತ್ತು ಪ್ಯಾಕೇಜ್ ಕೂಡ ಅದ್ಭುತವಾಗಿತ್ತು. ಆದರೂ ಅವರು ಅದನ್ನು ನಯವಾಗಿಯೇ ನಿರಾಕರಿಸಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ ಅತ್ಯಂತ ಪ್ರಾಮಾಣಿಕವಾದುದು. “ನನಗೆ ಬಂದಿದ್ದ ಹುದ್ದೆಗೆ ಬೇಕಾದ ಕೆಲವು ಕೌಶಲಗಳು (Skills) ಸದ್ಯಕ್ಕೆ ನನ್ನಲ್ಲಿಲ್ಲ. ಆ ಮಟ್ಟದ ಜವಾಬ್ದಾರಿಯನ್ನು ನಿಭಾಯಿಸಲು ನಾನು ಈಗಲೇ ಸಿದ್ಧನಿಲ್ಲ ಎಂದು ಕಂಪನಿಗೆ ವಿವರಿಸಿ ಆಫರ್ ರಿಜೆಕ್ಟ್ ಮಾಡಿದ್ದೇನೆ” ಎಂದು ಅವರು ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರ ನೀಡಿದ ವನೇಶ್, “ಒಂದು ಕಂಪನಿ ನಮಗೆ ಭಾರಿ ಮೊತ್ತದ ಸಂಬಳ ನೀಡುತ್ತಿದೆ ಎಂದರೆ ನಮ್ಮ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಗಳಿರುತ್ತವೆ. ಕೆಲಸಕ್ಕೆ ಸೇರಿದ ಮೇಲೆ ಅದನ್ನು ಕಲಿಯಲು ನಮಗೆ ಹೆಚ್ಚು ಸಮಯ ಸಿಗುವುದಿಲ್ಲ. ಒಂದು ವೇಳೆ ನಾನು ಅಲ್ಲಿ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಅದು ನನಗೂ ಮತ್ತು ಕಂಪನಿಗೂ ರಿಸ್ಕ್ ಆಗುತ್ತದೆ. ಹಾಗಾಗಿ ಹಣಕ್ಕಿಂತ ಹೆಚ್ಚಾಗಿ ನನ್ನ ದಕ್ಷತೆಗೆ ಆದ್ಯತೆ ನೀಡಿದ್ದೇನೆ” ಎಂದು ಹೇಳಿದ್ದಾರೆ.
ವನೇಶ್ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಅವರ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದಾರೆ. “ಸಂಬಳಕ್ಕಾಗಿ ಮಾತ್ರ ಕೆಲಸ ಮಾಡದೆ, ಕಂಪನಿಗೆ ನ್ಯಾಯ ಒದಗಿಸಬೇಕು ಎಂಬ ನಿಮ್ಮ ಆಲೋಚನೆ ಅದ್ಭುತ” ಎಂದು ಕೆಲವರು ಶ್ಲಾಘಿಸಿದ್ದಾರೆ. ಆದರೆ ಇನ್ನೊಂದು ವರ್ಗದ ಜನರು, “ಹೊಸ ಸವಾಲುಗಳನ್ನು ಸ್ವೀಕರಿಸಿದಾಗಲೇ ಮನುಷ್ಯ ಬೆಳೆಯಲು ಸಾಧ್ಯ. ಕೆಲಸ ಮಾಡುತ್ತಲೇ ಹೊಸ ಕೌಶಲಗಳನ್ನು ಕಲಿಯಬಹುದಿತ್ತು, ನೀವು ದೊಡ್ಡ ಅವಕಾಶವನ್ನು ಕೈಚೆಲ್ಲಿದ್ದೀರಿ” ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ, ಹಣಕ್ಕಿಂತ ಕೆಲಸದ ಮೇಲಿನ ಬದ್ಧತೆಗೆ ಆದ್ಯತೆ ನೀಡಿದ ಈ ಟೆಕ್ಕಿಯ ಕಥೆ ಈಗ ಐಟಿ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

