ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು.
ಈ ವರ್ಷ ಮೂರು ಇಲಾಖೆಗಳ ವ್ಯಾಪ್ತಿಯಿಂದ ಒಟ್ಟು 82 ಶಿಕ್ಷಕರು ಹಾಗೂ ಶಿಕ್ಷಣ ತಜ್ಞರನ್ನು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 48 ಶಿಕ್ಷಕರು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ಗಳಿಂದ 21 ಶಿಕ್ಷಕರು/ಬೋಧಕ ಸಿಬ್ಬಂದಿ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದಿಂದ 13 ಕೌಶಲ್ಯ ತರಬೇತುದಾರರು ಸೇರಿದ್ದಾರೆ.
ಪ್ರಶಸ್ತಿ ಪುರಸ್ಕೃತರು ತಮ್ಮ ಬೋಧನಾ ವೃತ್ತಿಯ ಪಯಣವನ್ನು ರೂಪಿಸಿದ ಅನುಭವಗಳು ಮತ್ತು ಹೊಸತನದ ಪ್ರಯೋಗಗಳ ಬಗ್ಗೆ ಪ್ರಧಾನಮಂತ್ರಿಯವರೊಂದಿಗೆ ಹಂಚಿಕೊಂಡರು. ತರಗತಿಯ ಕಲಿಕೆಯನ್ನು ಮತ್ತಷ್ಟು ಆಸಕ್ತಿದಾಯಕ ಹಾಗೂ ಪರಿಣಾಮಕಾರಿಯಾಗಿಸಲು ತಾವು ಅನುಸರಿಸಿದ ಹಲವು ಸೃಜನಾತ್ಮಕ ವಿಧಾನಗಳ ಬಗ್ಗೆಯೂ ಅವರು ವಿವರಿಸಿದರು.
ಮಕ್ಕಳ ಶೈಕ್ಷಣಿಕ ಸಾಧನೆ ಮಾತ್ರ ನೋಡಬೇಡಿ: ಮೋದಿ
ಮಕ್ಕಳ ಶೈಕ್ಷಣಿಕ ಸಾಧನೆಗೆ ಮಾತ್ರ ಶಿಕ್ಷಕರು ಸೀಮಿತರಾಗಬಾರದು. ಮಕ್ಕಳ ವರ್ತನೆ ಮತ್ತು ದೈನಂದಿನ ಜೀವನದ ಬಗ್ಗೆಯೂ ಶಿಕ್ಷಕರು ಗಮನ ಹರಿಸಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆ ಕಡಿಮೆಯಾಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಜೀವನದಲ್ಲಿ ಶಿಕ್ಷಕರ ಪಾತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ ಎಂದರು.
ಮಾದಕ ವ್ಯಸನದ ಸಮಸ್ಯೆಯ ಬಗ್ಗೆಯೂ ಮಾತನಾಡಿದ ಪ್ರಧಾನಿ, ಮಕ್ಕಳ ವರ್ತನೆಯಲ್ಲಿ ಕಂಡುಬರುವ ಬದಲಾವಣೆಗಳ ಬಗ್ಗೆ ಶಿಕ್ಷಕರು ಎಚ್ಚರಿಕೆಯಿಂದ ಗಮನಿಸಬೇಕು. ಅಂತಹ ಬದಲಾವಣೆಗಳಿಗೆ ಕಾರಣವೇನು ಎಂಬುದನ್ನು ಗುರುತಿಸಿ, ಮಕ್ಕಳಿಗೆ ವ್ಯಸನದಿಂದ ಹೊರಬರಲು ಸಹಾಯ ಮಾಡಬೇಕು ಎಂದು ಕರೆ ನೀಡಿದರು.
ಮಕ್ಕಳ ಮುಗ್ಧತೆಯನ್ನು ಕಾಪಾಡುವುದು ಶಿಕ್ಷಕರ ಜವಾಬ್ದಾರಿ
ಮಕ್ಕಳ ಬಾಲ್ಯದ ಮುಗ್ಧತೆಯನ್ನು ಕಾಪಾಡುವುದು ಶಿಕ್ಷಕರು ವಹಿಸಬಹುದಾದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು.
ಮಕ್ಕಳಲ್ಲಿ ಸಹಜ ಕುತೂಹಲ ಮತ್ತು ಕಲಿಯುವ ಆಸಕ್ತಿ ಇರುತ್ತದೆ. ಶಿಕ್ಷಕರು ಈ ಕುತೂಹಲವನ್ನು ಸರಿಯಾದ ರೀತಿಯಲ್ಲಿ ಬೆಳೆಸಿ, ಸೂಕ್ತ ದಿಕ್ಕಿನಲ್ಲಿ ಕೊಂಡೊಯ್ದರೆ ಮಕ್ಕಳ ಸಮಗ್ರ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.
ಮಕ್ಕಳ ಸ್ಕ್ರೀನ್ ಟೈಮ್ ಬಗ್ಗೆಯೂ ಕಾಳಜಿ ವಹಿಸಿ
ಮಕ್ಕಳು ಮೊಬೈಲ್ ಮತ್ತು ಇತರ ಡಿಜಿಟಲ್ ಸಾಧನಗಳಲ್ಲಿ ಕಳೆಯುವ ಸಮಯ ಹೆಚ್ಚುತ್ತಿರುವುದು ದೊಡ್ಡ ಕಳವಳದ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಕ್ಕಳು ಎಷ್ಟು ಸಮಯ ಸ್ಕ್ರೀನ್ ನೋಡುತ್ತಾರೆ ಮತ್ತು ರಾತ್ರಿ ತಡವಾಗುವವರೆಗೂ ಮೊಬೈಲ್ ಬಳಸುತ್ತಾರೆಯೇ ಎಂಬುದರ ಬಗ್ಗೆ ಶಿಕ್ಷಕರು ಪೋಷಕರೊಂದಿಗೆ ಮಾತನಾಡಬೇಕು ಎಂದು ಸಲಹೆ ನೀಡಿದರು.
ಕ್ರೀಡೆ, ದೈಹಿಕ ಚಟುವಟಿಕೆಗಳು ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ಮೂಲಕ ಅವರನ್ನು ಕ್ರಮೇಣ ಅತಿಯಾದ ಸ್ಕ್ರೀನ್ ಬಳಕೆಯಿಂದ ಹೊರತರಬಹುದು ಎಂದು ಪ್ರಧಾನಿ ಹೇಳಿದರು.
ತರಗತಿಯ ಹೊರಗೂ ಮಕ್ಕಳಿಗೆ ಕಲಿಕೆ ಅಗತ್ಯ
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಕ್ಕಳನ್ನು ಕೇವಲ ತರಗತಿಯೊಳಗೆ ಸೀಮಿತಗೊಳಿಸದೆ ನೈಜ ಜಗತ್ತಿನ ಕೌಶಲ್ಯಗಳು ಮತ್ತು ವಿವಿಧ ಕೆಲಸದ ಕ್ಷೇತ್ರಗಳೊಂದಿಗೆ ಸಂಪರ್ಕ ಕಲ್ಪಿಸುವುದು ಅಗತ್ಯ ಎಂದು ಹೇಳಿದರು.
ಶಿಕ್ಷಕರು ಪಠ್ಯಕ್ರಮದ ಜ್ಞಾನವನ್ನು ನೀಡುವುದಕ್ಕಷ್ಟೇ ಸೀಮಿತರಾಗದೆ, ಮಕ್ಕಳಲ್ಲಿ ಶ್ರಮದ ಗೌರವ (Dignity of Labour) ಸೇರಿದಂತೆ ಉತ್ತಮ ಮೌಲ್ಯಗಳನ್ನು ಬೆಳೆಸುವ ಕೆಲಸವನ್ನೂ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದರು.

