ವೈಯಕ್ತಿಕ ಸಾಲ ಪಡೆಯುವಾಗ ಹೆಚ್ಚಿನ ಮಾಸಿಕ ಸಂಬಳ ಇರುವುದು ಮಾತ್ರ ಮುಖ್ಯವಲ್ಲ. ನಿಮ್ಮ ಸಂಬಳದಲ್ಲಿ ಈಗಾಗಲೇ ಎಷ್ಟು ಮೊತ್ತ ಹಳೆಯ ಸಾಲಗಳ EMI ಪಾವತಿಗೆ ಹೋಗುತ್ತಿದೆ ಎಂಬುದೂ ಬಹಳ ಮುಖ್ಯ. ಹೆಚ್ಚಿನ ಆದಾಯದ ಜೊತೆಗೆ ಕಡಿಮೆ DTI ಅನುಪಾತ ಇದ್ದರೆ, ತುಲನಾತ್ಮಕವಾಗಿ ಹೆಚ್ಚಿನ ಮೊತ್ತದ ವೈಯಕ್ತಿಕ ಸಾಲ ಪಡೆಯುವ ಸಾಧ್ಯತೆ ಇರುತ್ತದೆ.
ತುರ್ತು ಹಣದ ಅಗತ್ಯ ಎದುರಾದಾಗ ಪರ್ಸನಲ್ ಲೋನ್ ಅನೇಕರಿಗೆ ನೆರವಾಗುತ್ತದೆ. ಆದರೆ ಬ್ಯಾಂಕ್‌ಗಳು ಕೇಳಿದಷ್ಟು ಸಾಲವನ್ನು ಸುಲಭವಾಗಿ ನೀಡುವುದಿಲ್ಲ. ನಿಮ್ಮ ಮಾಸಿಕ ಸಂಬಳ, ಕ್ರೆಡಿಟ್ ಸ್ಕೋರ್, ಈಗಾಗಲೇ ಇರುವ ಸಾಲದ EMI ಹಾಗೂ DTI ಅನುಪಾತ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಿದ ಬಳಿಕವೇ ಸಾಲದ ಮೊತ್ತವನ್ನು ನಿರ್ಧರಿಸುತ್ತವೆ. ಹಾಗಾದರೆ ಪರ್ಸನಲ್ ಲೋನ್ ಪಡೆಯಲು ಕನಿಷ್ಠ ಎಷ್ಟು ಸಂಬಳ ಇರಬೇಕು? ಪ್ರಮುಖ ಬ್ಯಾಂಕ್‌ಗಳ ನಿಯಮಗಳೇನು? ಇಲ್ಲಿದೆ ಮಾಹಿತಿ.
ಎಲ್ಲರಿಗೂ ಹಣ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಅದೇ ಸಮಯದಲ್ಲಿ ಅನಿರೀಕ್ಷಿತ ಸಂದರ್ಭಗಳಲ್ಲಿ ಏಕಾಏಕಿ ಹೆಚ್ಚಿನ ಹಣದ ಅಗತ್ಯ ಎದುರಾಗಬಹುದು. ಇಂತಹ ಸಂದರ್ಭದಲ್ಲಿ ವೈಯಕ್ತಿಕ ಸಾಲ (Personal Loan) ಒಂದು ಆಯ್ಕೆಯಾಗಬಹುದು. ಆದರೆ, ಕೇಳಿದಷ್ಟು ಮೊತ್ತಕ್ಕೆ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ವೈಯಕ್ತಿಕ ಸಾಲ ನೀಡುವ ಮೊದಲು ಹಲವು ಷರತ್ತುಗಳನ್ನು ಪರಿಶೀಲಿಸುತ್ತವೆ. ಹಾಗಾದರೆ ಪರ್ಸನಲ್ ಲೋನ್ ಪಡೆಯಲು ಎಷ್ಟು ಆದಾಯ ಇರಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ.
ಸಾಲ ನೀಡುವ ಮುನ್ನ ಬ್ಯಾಂಕ್ ಏನೆಲ್ಲಾ ಪರಿಶೀಲಿಸುತ್ತದೆ?
ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಬ್ಯಾಂಕ್‌ಗಳು ಹಾಗೂ NBFCಗಳು ಹಲವು ಅಂಶಗಳನ್ನು ಪರಿಶೀಲಿಸುತ್ತವೆ. ಇದರಲ್ಲಿ ಕ್ರೆಡಿಟ್ ಸ್ಕೋರ್, ವಯಸ್ಸು, ಕನಿಷ್ಠ ಆದಾಯ, ಉದ್ಯೋಗದ ಸ್ಥಿತಿ ಸೇರಿದಂತೆ ಹಲವು ಮಾನದಂಡಗಳು ಸೇರಿವೆ.
ಅರ್ಜಿದಾರರು ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಬಹುದೇ ಎಂಬುದನ್ನು ತಿಳಿದುಕೊಳ್ಳಲು ಅವರ ಆದಾಯವನ್ನು ಬ್ಯಾಂಕ್ ಲೆಕ್ಕ ಹಾಕುತ್ತದೆ. ಅಂದರೆ, ಪ್ರತಿ ತಿಂಗಳು ಹೊಸ ಸಾಲದ EMI ಪಾವತಿಸುವಷ್ಟು ಆರ್ಥಿಕ ಸಾಮರ್ಥ್ಯ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ವೈಯಕ್ತಿಕ ಸಾಲಕ್ಕೆ ಸಾಮಾನ್ಯವಾಗಿ ಯಾವುದೇ ಆಸ್ತಿ ಅಡಮಾನ ಅಥವಾ ಭದ್ರತೆ ಇರುವುದಿಲ್ಲ. ಹೀಗಾಗಿ ಸಾಲಗಾರರು ಸಾಲ ಮರುಪಾವತಿಸಲು ವಿಫಲರಾದರೆ, ಆಸ್ತಿಯನ್ನು ಹರಾಜು ಹಾಕುವ ಮೂಲಕ ಹಣ ವಸೂಲಿ ಮಾಡಲು ಬ್ಯಾಂಕ್‌ಗೆ ಅವಕಾಶ ಇರುವುದಿಲ್ಲ. ಈ ಕಾರಣದಿಂದ ಬ್ಯಾಂಕ್‌ಗಳು ಅರ್ಜಿದಾರರ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತವೆ.
ಸಾಲ-ಆದಾಯ ಅನುಪಾತ (DTI) ಎಂದರೇನು?
ವೈಯಕ್ತಿಕ ಸಾಲ ಮಂಜೂರು ಮಾಡುವ ಮೊದಲು ಬ್ಯಾಂಕ್‌ಗಳು ಅರ್ಜಿದಾರರ ಮಾಸಿಕ ಆದಾಯ ಮತ್ತು ಅದರಲ್ಲಿ ಈಗಾಗಲೇ ಎಷ್ಟು ಮೊತ್ತ ಹಳೆಯ ಸಾಲಗಳ EMI ಪಾವತಿಗೆ ಹೋಗುತ್ತಿದೆ ಎಂಬುದನ್ನು ಪರಿಶೀಲಿಸುತ್ತವೆ.
ಇದರಿಂದ ಹೊಸ ಸಾಲದ EMIಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಸಾಮರ್ಥ್ಯ ಅರ್ಜಿದಾರರಿಗೆ ಇದೆಯೇ ಎಂಬುದನ್ನು ಬ್ಯಾಂಕ್ ಅರ್ಥಮಾಡಿಕೊಳ್ಳುತ್ತದೆ.ಇದಕ್ಕೆ Debt-to-Income Ratio (DTI) ಪ್ರಮುಖ ಮಾನದಂಡವಾಗಿದೆ. ಅಂದರೆ, ವ್ಯಕ್ತಿಯ ಮಾಸಿಕ ಆದಾಯದಲ್ಲಿ ಎಷ್ಟು ಶೇಕಡಾ ಮೊತ್ತ ಸಾಲದ EMI ಪಾವತಿಗೆ ಖರ್ಚಾಗುತ್ತಿದೆ ಎಂಬುದನ್ನು DTI ಅನುಪಾತ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ: ಒಬ್ಬ ವ್ಯಕ್ತಿಯ ಮಾಸಿಕ ಆದಾಯ ₹50,000 ಇದ್ದು, ಅವರು ಈಗಾಗಲೇ ಪಡೆಯುತ್ತಿರುವ ಸಾಲಕ್ಕೆ ತಿಂಗಳಿಗೆ ₹12,500 EMI ಪಾವತಿಸುತ್ತಿದ್ದರೆ, ಅವರ ಆದಾಯದ 25% ಸಾಲ ಮರುಪಾವತಿಗೆ ಹೋಗುತ್ತಿದೆ ಎಂದರ್ಥ.
ಸಾಮಾನ್ಯವಾಗಿ 35% ಅಥವಾ ಅದಕ್ಕಿಂತ ಕಡಿಮೆ DTI ಅನುಪಾತ ಹೊಂದಿರುವವರಿಗೆ ವೈಯಕ್ತಿಕ ಸಾಲ ಪಡೆಯುವ ಸಾಧ್ಯತೆ ಹೆಚ್ಚು. ಆದರೆ ಇತರ ಅರ್ಹತಾ ಮಾನದಂಡಗಳನ್ನೂ ಪೂರೈಸಬೇಕಾಗುತ್ತದೆ.
ಕೆಲವು ಬ್ಯಾಂಕ್‌ಗಳು 40–45% DTI ಅನುಪಾತ ಹೊಂದಿರುವವರಿಗೂ ವೈಯಕ್ತಿಕ ಸಾಲ ನೀಡಬಹುದು. ಅಂತಹ ಸಂದರ್ಭಗಳಲ್ಲಿ ಹೆಚ್ಚುವರಿ ಭದ್ರತೆಗಾಗಿ ಸಹ-ಅರ್ಜಿದಾರ (Co-applicant) ಅಥವಾ ಗ್ಯಾರಂಟರ್ ಕೇಳಬಹುದು. ಸಾಲದ ಮೊತ್ತವನ್ನು ಕಡಿಮೆ ಮಾಡುವುದು ಅಥವಾ ಸಾಲದ ಅವಧಿಯನ್ನು ಹೆಚ್ಚಿಸುವಂತೆ ಬ್ಯಾಂಕ್ ಸಲಹೆ ನೀಡಬಹುದು.
ಹೀಗಾಗಿ ಪರ್ಸನಲ್ ಲೋನ್ ಪಡೆಯುವಾಗ ಹೆಚ್ಚಿನ ಸಂಬಳ ಇರುವುದಷ್ಟೇ ಮುಖ್ಯವಲ್ಲ. ಆ ಸಂಬಳದಲ್ಲಿ ಈಗಾಗಲೇ ಎಷ್ಟು ಮೊತ್ತ ಹಳೆಯ ಸಾಲಗಳ EMI ಪಾವತಿಗೆ ಹೋಗುತ್ತಿದೆ ಎಂಬುದೂ ಮುಖ್ಯ. ಹೆಚ್ಚಿನ ಆದಾಯ ಮತ್ತು ಕಡಿಮೆ DTI ಅನುಪಾತ ಇದ್ದರೆ ಹೆಚ್ಚಿನ ಮೊತ್ತದ ವೈಯಕ್ತಿಕ ಸಾಲ ಪಡೆಯುವ ಅವಕಾಶ ಹೆಚ್ಚಿರುತ್ತದೆ. ಮತ್ತೊಂದೆಡೆ, ಆದಾಯ ಕಡಿಮೆಯಿದ್ದರೆ ಸಾಲದ ಮೊತ್ತವೂ ಸಹಜವಾಗಿ ಸೀಮಿತವಾಗಿರಬಹುದು.
ಪರ್ಸನಲ್ ಲೋನ್ ಪಡೆಯಲು ಎಷ್ಟು ಆದಾಯ ಬೇಕು?
ಈ ನಿಯಮಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತವೆ. ಪ್ರಮುಖ ಬ್ಯಾಂಕ್‌ಗಳ ಕನಿಷ್ಠ ಆದಾಯದ ಮಾನದಂಡಗಳು ಹೀಗಿವೆ:
HDFC ಬ್ಯಾಂಕ್
HDFC ಬ್ಯಾಂಕ್‌ನ Express Personal Loan ಪಡೆಯಲು ಕನಿಷ್ಠ ಮಾಸಿಕ ಆದಾಯ ₹25,000 ಇರಬೇಕು. ಜೊತೆಗೆ ಸಾಲದ ಅರ್ಜಿದಾರರು ಯಾವ ರೀತಿಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನೂ ಪರಿಗಣಿಸಲಾಗುತ್ತದೆ. ಸ್ವಂತ ವ್ಯವಹಾರ ಹೊಂದಿರುವವರಿಗೆ HDFC ಬ್ಯಾಂಕ್ ನಿರ್ದಿಷ್ಟ ಆದಾಯದ ಮಾನದಂಡವನ್ನು ನಿಗದಿಪಡಿಸಿಲ್ಲ.
ಆಕ್ಸಿಸ್ ಬ್ಯಾಂಕ್
ಆಕ್ಸಿಸ್ ಬ್ಯಾಂಕ್‌ನಲ್ಲಿ ಪರ್ಸನಲ್ ಲೋನ್ ಪಡೆಯಲು ಅಗತ್ಯವಿರುವ ಕನಿಷ್ಠ ಆದಾಯವು ಅರ್ಜಿದಾರರು ಆ ಬ್ಯಾಂಕ್‌ನ ಗ್ರಾಹಕರೇ ಅಥವಾ ಅಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
-
ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದರೆ — ಕನಿಷ್ಠ ಆದಾಯ ₹15,000
-
ಗ್ರಾಹಕರಲ್ಲದಿದ್ದರೆ — ಕನಿಷ್ಠ ಆದಾಯ ₹25,000
ಈ ಆದಾಯದ ಮಾನದಂಡವು ವೇತನ ಪಡೆಯುವ ವೈದ್ಯರು ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್
ಕೋಟಕ್ ಬ್ಯಾಂಕ್‌ನಲ್ಲಿಯೂ ಅರ್ಜಿದಾರರು ಆ ಬ್ಯಾಂಕ್‌ನ ಗ್ರಾಹಕರೇ ಅಥವಾ ಅಲ್ಲವೇ ಎಂಬುದರ ಆಧಾರದ ಮೇಲೆ ಕನಿಷ್ಠ ಆದಾಯ ಬದಲಾಗುತ್ತದೆ.
-
ಕೋಟಕ್ ಬ್ಯಾಂಕ್ ಗ್ರಾಹಕರಾಗಿದ್ದರೆ — ಕನಿಷ್ಠ ಆದಾಯ ₹25,000
-
ಗ್ರಾಹಕರಲ್ಲದಿದ್ದರೆ — ಕನಿಷ್ಠ ಮಾಸಿಕ ಆದಾಯ ₹30,000
-
ಕೋಟಕ್ ಬ್ಯಾಂಕ್ ಉದ್ಯೋಗಿಯಾಗಿದ್ದರೆ — ಕನಿಷ್ಠ ಆದಾಯ ₹20,000
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
SBIನಲ್ಲಿ ಪರ್ಸನಲ್ ಲೋನ್ ಪಡೆಯುವಾಗ ಅರ್ಜಿದಾರರು ಸರ್ಕಾರಿ ಉದ್ಯೋಗಿಯೇ ಅಥವಾ ಇಲ್ಲವೇ ಎಂಬುದನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.
-
ಸರ್ಕಾರಿ ನೌಕರರು ಮತ್ತು ರಕ್ಷಣಾ ಸಿಬ್ಬಂದಿ — ಕನಿಷ್ಠ ಆದಾಯ ₹20,000
-
ಕಾರ್ಪೊರೇಟ್ ಉದ್ಯೋಗಿಗಳು — ಕನಿಷ್ಠ ಆದಾಯ ₹25,000
ಆದರೆ SBIನಲ್ಲಿ ಕನಿಷ್ಠ ಆದಾಯದ ಮಿತಿ ನಗರ, ನಗರ ಪ್ರದೇಶದ ಹೊರವಲಯ ಮತ್ತು ಗ್ರಾಮೀಣ ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು.
ಒಟ್ಟಿನಲ್ಲಿ: ಪರ್ಸನಲ್ ಲೋನ್ ಪಡೆಯಲು ಕೇವಲ ಹೆಚ್ಚಿನ ಸಂಬಳವಿದ್ದರೆ ಸಾಕಾಗುವುದಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್, ಈಗಿರುವ ಸಾಲಗಳ EMI, DTI ಅನುಪಾತ, ಉದ್ಯೋಗದ ಸ್ಥಿರತೆ ಮತ್ತು ಬ್ಯಾಂಕ್‌ನ ಅರ್ಹತಾ ಮಾನದಂಡಗಳು ಕೂಡ ಸಾಲ ಮಂಜೂರಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

