ಹಾವೇರಿ: ಸರ್ಕಾರಿ ಉರ್ದು ಶಾಲೆ ಶಿಕ್ಷಕನಿಗೆ ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಣೂರು ಸಿಪಿಐ ಎಸ್. ದೇವಾನಂದ್ ಮತ್ತು ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ಓದನವರ ಅವರನ್ನು ಅಮಾನತು ಮಾಡಲಾಗಿದೆ.
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಡಿಸೆಂಬರ್ 10 ರಂದು ಪೋಷಕರು, ಸ್ಥಳೀಯರು ಶಿಕ್ಷಕ ಜಗದೀಶ್ ಅವರನ್ನು ಥಳಿಸಿ ಚಪ್ಪಲಿಯಿಂದ ಹೊಡೆದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಎಸ್ಪಿ ಯಶೋದಾ ವಂಟಗೋಡಿ ಅವರು ದಾವಣಗೆರೆ ಪೂರ್ವ ವಲಯ ಐಜಿಪಿಗೆ ವರದಿ ನೀಡಿದ್ದರು.
ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕೃತ್ಯವನ್ನು ಗೂಂಡಾಗಿರಿ ಎಂದು ದೂರಿದ ಅನೇಕ ಸಂಘಟನೆಗಳು ಸವಣೂರು ಬಂದ್ ಮಾಡಿ ಪ್ರತಿಭಟಿಸಿದ್ದರು. ಶಿಕ್ಷಕರ ತಪ್ಪು ಮಾಡಿದ್ದರೆ ಶಿಕ್ಷೆ ನೀಡಲು ಪೊಲೀಸ್ ಇಲಾಖೆ, ಕೋರ್ಟ್ ಇದೆ. ಸ್ಥಳೀಯರೇ ಕಾನೂನು ಕೈಗೆತ್ತಿಕೊಂಡರೆ ಅಪರಾಧವಾಗುತ್ತದೆ ಎಂದು ಅಸಮಾಧಾನ ವ್ಯಕ್ತವಾಗಿತ್ತು.
ಅಲ್ಲದೆ ಶಿಕ್ಷಕನ ಮೆರವಣಿಗೆ ಸಂದರ್ಭದಲ್ಲಿ ಸ್ಥಳದಲ್ಲಿದ್ದರೂ ಹೆಡ್ ಕಾನ್ ಸ್ಟೆಬಲ್ ಕೃತ್ಯ ತಡೆದಿಲ್ಲ. ಮಾಹಿತಿ ತಿಳಿದ ಕೂಡಲೇ ಕ್ರಮ ಕೈಗೊಳ್ಳದೇ ಸಿಪಿಐ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರನ್ನೂ ಅಮಾನತು ಮಾಡಲಾಗಿದೆ.

