ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ತಮಿಳುನಾಡು ರಾಜ್ಯಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ತಮಿಳುನಾಡು ವಿಧಾನಸಭಾ ಚುನಾವಣೆ 2026ರ ತಯಾರಿ ನಡೆಯುತ್ತಿದೆ. ರಾಜ್ಯದ 234 ಸ್ಥಾನಗಳಿಗೆ ಯಾವುದೇ ಕ್ಷಣದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ‘ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಘೋಷಿಸಲು ಅನುಮೋದನೆ ನೀಡಲಾಗಿದೆ.
ತಮಿಳುನಾಡಿನ ದೇವಾಲಯಗಳ ನಗರ ಎಂದೇ ಖ್ಯಾತಿ ಪಡೆದಿರುವ ಮಧುರೈನಲ್ಲಿರುವ ವಿಮಾನ ನಿಲ್ದಾಣ ರಾಜ್ಯದ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇನ್ನು ಮುಂದೆ ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಕಾರ್ಯ ನಿರ್ವಹಣೆ ಮಾಡಲಿದೆ.
ಮಧುರೈ ವಿಮಾನ ನಿಲ್ದಾಣವನ್ನು ‘ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಘೋಷಣೆ ಮಾಡಿದ ಕಾರಣ ಇನ್ನು ಮುಂದೆ ಪ್ರಾದೇಶಿಕ ಸಂಪರ್ಕ ಇನ್ನಷ್ಟು ಹೆಚ್ಚಾಗಲಿದೆ. ಇದು ಆರ್ಥಿಕ ಮತ್ತು ಪ್ರದೇಶದ ಅಭಿವೃದ್ಧಿಗೆ ಸಹಾಯಕವಾಗಲಿದೆ.
ಮಧುರೈ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸ್ವಾಗತಿಸಲಿದ್ದು, ಇದರಿಂದ ಸ್ಥಳೀಯ ಉದ್ಯಮ, ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮಧುರೈ ವಿಮಾನ ನಿಲ್ದಾಣ: ತಮಿಳುನಾಡು ರಾಜ್ಯದಲ್ಲಿ ಚೆನ್ನೈ, ಕೊಯಮತ್ತೂರು ಮತ್ತು ತಿರುಚ್ಚಿರಾಪಳ್ಳಿ ವಿಮಾನ ನಿಲ್ದಾಣಗಳ ನಂತರ ಪ್ರಯಾಣಿಕರ ದಟ್ಟಣೆಯ ಆಧಾರದ ಮೇಲೆ ಮಧುರೈ ವಿಮಾನ ನಿಲ್ದಾಣ 4ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.
ಈ ವಿಮಾನ ನಿಲ್ದಾಣ ನಗರ ಕೇಂದ್ರದಿಂದ ಸುಮಾರು 12 ಕಿ.ಮೀ. ದೂರದಲ್ಲಿದೆ. 2026ರ ಜನವರಿಯ ಮಾಹಿತಿಯಂತೆ 4 ವಿಮಾನಯಾನ ಸಂಸ್ಥೆಗಳು ಈ ವಿಮಾನ ನಿಲ್ದಾಣದಿಂದ ಮೂರು ಅಂತರರಾಷ್ಟ್ರೀಯ ತಾಣಗಳು ಸೇರಿದಂತೆ ಒಟ್ಟು 8 ತಾಣಗಳಿಗೆ ವಾಣಿಜ್ಯ ಸೇವೆಗಳನ್ನು ನಿರ್ವಹಣೆ ಮಾಡುತ್ತಿವೆ.
ಈ ವಿಮಾನ ನಿಲ್ದಾಣವನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ 1942ರಲ್ಲಿ ರಾಯಲ್ ಏರ್ ಫೋರ್ಸ್‌ಗಾಗಿ ಏರ್‌ಫೀಲ್ಡ್ ಆಗಿ ಸ್ಥಾಪಿಸಲಾಯಿತು ಮತ್ತು ನಂತರ ಇದನ್ನು ಸರಕು ಸಾಗಣೆ ಕಾರ್ಯಾಚರಣೆಗಳಿಗಾಗಿ ಬಳಕೆ ಮಾಡಲಾಗುತ್ತಿತ್ತು.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1952ರಲ್ಲಿ ಈ ವಿಮಾನ ನಿಲ್ದಾಣವು ಪ್ರಾರಂಭವಾಯಿತು. ಮತ್ತು ಪ್ರಯಾಣಿಕರ ವಿಮಾನಗಳ ಸಂಚಾರ ಪುನರಾರಂಭಗೊಂಡವು. ದೊಡ್ಡ ಗಾತ್ರದ ವಿಮಾನಗಳನ್ನು ನಿರ್ವಹಿಸಲು 1980ರಲ್ಲಿ ರನ್‌ವೇಯನ್ನು ವಿಸ್ತರಿಸಲಾಯಿತು.
2000ರ ದಶಕದ ಕೊನೆಯಲ್ಲಿ ವಿಮಾನ ನಿಲ್ದಾಣದ ಆಧುನೀಕರಣ ಕೈಗೊಳ್ಳಲಾಯಿತು. 2010ರಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ ಪ್ರಾರಂಭವಾಯಿತು. 2011ರಲ್ಲಿ ಇದನ್ನು ಕಸ್ಟಮ್ಸ್ ವಿಮಾನ ನಿಲ್ದಾಣವೆಂದು ಅಧಿಸೂಚಿಸಲಾಯಿತು, ಸೀಮಿತ ಅಂತರರಾಷ್ಟ್ರೀಯ ವಿಮಾನಗಳಿಗೆ ಅನುಮತಿ ನೀಡಲಾಯಿತು.
2012ರಲ್ಲಿ ಅಂತರರಾಷ್ಟ್ರೀಯ ಸೇವೆಗಳು ಪ್ರಾರಂಭವಾದವು. ಹಳೆಯ ಪ್ರಯಾಣಿಕರ ಟರ್ಮಿನಲ್ ಅನ್ನು ಸರಕು ಟರ್ಮಿನಲ್ ಆಗಿ ಪರಿವರ್ತಿಸಲಾಯಿತು ಮತ್ತು 2017ರ ಡಿಸೆಂಬರ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಸರಕು ಕಾರ್ಯಾಚರಣೆಗಳು ಪ್ರಾರಂಭವಾದವು. ವಿಮಾನ ನಿಲ್ದಾಣವು ಒಂದೇ ರನ್‌ವೇಯನ್ನು ಹೊಂದಿದೆ.
ಈ ವಿಮಾನ ನಿಲ್ದಾಣವು ಕೊಲಂಬೊ, ದುಬೈ ಮತ್ತು ಸಿಂಗಾಪುರದಂತಹ ಅಂತರರಾಷ್ಟ್ರೀಯ ತಾಣಗಳಿಗೆ ನೇರ ಸಂಪರ್ಕವನ್ನು ಹೊಂದಿದೆ. ಅಲ್ಲದೆ, ಇದು ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ನವದೆಹಲಿಯಂತಹ ದೇಶೀಯ ಮಾರ್ಗದ ವಿಮಾನ ಸೇವೆಯನ್ನು ಹೊಂದಿದೆ.

