ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದ ವೇಳೆಯೇ ವ್ಯಕ್ತಿಯೋರ್ವ ಏಕಾಏಕಿ ಟ್ರ್ಯಾಅಕಿಗೆ ಇಳಿದ ಘಟನೆ ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮಧ್ಯಾಹ್ನ 1.41ರ ಸುಮಾರಿಗೆ ಮೆಟ್ರೋ ರೈಲು ಬರುವಾಗ ವ್ಯಕ್ತಿ ಟ್ರ್ಯಾಕ್‌ಗೆ ಇಳಿದಿದ್ದಾನೆ. ಇದರಿಂದ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ವಿಳಂಬವಾಗಿದೆ. ಘಟನೆ ಹಿನ್ನೆಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಕುರಿತಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ‘ಇಂದು ಮಧ್ಯಾಹ್ನ ಸುಮಾರು 13:31 ಗಂಟೆಗೆ, ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲೊಂದು ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಅಪ್ ಟ್ರ್ಯಾಕ್‌ಗೆ ಹಾರಿದ್ದಾರೆ. ತಕ್ಷಣವೇ ನಿಲ್ದಾಣದ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಂಡು, ಸಂಬಂಧಪಟ್ಟ ವ್ಯಕ್ತಿಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದೆ.
ಸುರಕ್ಷತೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನೇರಳೆ ಮಾರ್ಗದ ಬಾಧಿತವಲ್ಲದ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಡುವೆ; ಹಾಗೂ ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವೆ ರೈಲು ಸೇವೆಗಳನ್ನು ನಿರ್ವಹಿಸಲಾಯಿತು.
ನೇರಳೆ ಮಾರ್ಗದ ರೈಲು ಸಂಚಾರವನ್ನು 1:58 ಗಂಟೆಯಿಂದ ಯಥಾಸ್ಥಿತಿಗೆ ತರಲಾಯಿತು. ಹಸಿರು ಮಾರ್ಗ ಮತ್ತು ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳಿಗೆ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿರುವ ಬಿಎಂಆರ್‌ಸಿಎಲ್, ಈ ಸಂದರ್ಭದಲ್ಲಿ ಸಾರ್ವಜನಿಕರು ನೀಡಿದ ಸಹಕಾರ ಮತ್ತು ಸಹನೆಗಾಗಿ ಧನ್ಯವಾದ ಕೂಡ ತಿಳಿಸಿದೆ.
ರೈಲಿನಡಿ ಸಿಲುಕಿದ್ದ ಮಹಿಳೆಯ ರಕ್ಷಣೆ:
ಮತ್ತೊಂದು ಪ್ರಕರಣದಲ್ಲಿ ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಮಹಿಳೆಯ ಕಾಲು ಪ್ಲಾಟ್‌ಫಾರ್ಮ್ ಮತ್ತು ಫುಟ್‌ಬೋರ್ಡ್ ನಡುವೆ ಸಿಲುಕಿಕೊಂಡು ರೈಲು ಸ್ವಲ್ಪ ದೂರ ಎಳೆದೊಯ್ದ ಘಟನೆ ರಾಜಸ್ಥಾನದ ಕಿಶನ್‌ಗಢ ರೈಲು ನಿಲ್ದಾಣದಲ್ಲಿ ನಡೆದಿದೆ.
ಈ ವೇಳೆ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ನಿರಂಜನ್ ಲಾಲ್ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ಆಕೆಯ ಜೀವವನ್ನು ಉಳಿಸಿದರು.
ಜೈಪುರ-ಉದಯಪುರ ರೈಲು ಕಿಶನ್‌ಗಢ ನಿಲ್ದಾಣ ತಲುಪಿದಾಗ, ಸೋನು ಕುಮಾವತ್ ಎಂಬ ಮಹಿಳೆ ರೈಲಿನಿಂದ ಇಳಿಯಲು ಪ್ರಯತ್ನಿಸಿದರು. ಆದರೆ, ಆಕೆಯ ಕಾಲು ಆಕಸ್ಮಿಕವಾಗಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ಫುಟ್‌ಬೋರ್ಡ್ ನಡುವೆ ಸಿಲುಕಿಕೊಂಡಿತು. ಪರಿಣಾಮವಾಗಿ, ಆಕೆಯನ್ನು ರೈಲಿನೊಂದಿಗೆ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ಕಿರುಚಲು ಪ್ರಾರಂಭಿಸಿದರು. ಇದು ನಿಲ್ದಾಣದಲ್ಲಿದ್ದ ಪ್ರಯಾಣಿಕರಲ್ಲಿ ತೀವ್ರ ಆತಂಕವನ್ನುಂಟುಮಾಡಿತು. ಅಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ನಿರಂಜನ್ ಲಾಲ್ ಪರಿಸ್ಥಿತಿಯನ್ನು ಗಮನಿಸಿ ಯಾವುದೇ ವಿಳಂಬವಿಲ್ಲದೆ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

