ಕಾರವಾರ: 1.15 ಕೋಟಿ ರೂ. ಹವಾಲಾ ಹಣ ದರೋಡೆ ಹಾಗೂ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಪೇದೆಯೊಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ್ ಬಂಧಿತ ಪೊಲೀಸ್ ಪೇದೆ. ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿದ್ದ ಹವಾಲಾ ಹಣವನ್ನು ದರೋಡೆ ಮಾಡುವ ಉದ್ದೇಶದಿಂದ ಸತ್ಯನಾರಾಯಣ ಎಂಬವರನ್ನು ಅಪಹರಿಸಿ, 1.15 ಕೋಟಿ ರೂ. ಹಣವನ್ನು ದೋಚಲಾಗಿತ್ತು.
ಈ ಸಂಬಂಧ ಸತ್ಯನಾರಾಯಣ ಅವರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಅಪಹರಣದ ಹಿಂದೆ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ್ ಅವರ ಸಂಚು ಇರುವುದು ಬಯಲಾಗಿದೆ. ಕಾರವಾರದ ಯುವಕರನ್ನು ಬಳಸಿಕೊಂಡುಕಿಡ್ನ್ಯಾಅಪ್ ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ ಕೋಳಂಕರ್ ಎಂಬ ಯುವಕನನ್ನು ಈ ಕೃತ್ಯಕ್ಕೆ ಬಳಸಿಕೊಂಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಗಣೇಶ ಕೋಳಂಕರ್ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಹೈಟೆಕ್ ಸ್ವಿಮ್ಮಿಂಗ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ದಾಳಿ: ಮೂವರು ಅರೆಸ್ಟ್
ಬೆಂಗಳೂರು: ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಹೈಟೆಕ್ ಸ್ವಿಮ್ಮಿಂಗ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದ ಹೆಸರಲ್ಲಿ ಹೈಟೆಕ್ ಸ್ವಿಮ್ಮಿಂಗ್ ಪೂಲ್ ಪಾರ್ಟಿ ಆಯೋಜಿಸಲಾಗಿತ್ತು.
ಖಚಿತ ಮಾಹಿತಿ ಮೇರ್ತೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ವಿವಿಧ ಬಗೆಯ ಮಾದಕ ವಸ್ತುಗಳು, ವಿದೇಶಿ ಮದ್ಯ ಹಾಗೂ ನಿಷೇಧಿತ ಹುಕ್ಕಾಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಮಾರತ್ತಹಳ್ಳಿ ಸಮೀಪದ ಕರಿಯಮ್ಮನ ಅಗ್ರಹಾರದಲ್ಲಿರುವ ವಿಲ್ಲಾವೊಂದರಲ್ಲಿ ಈ ಪೂಲ್ ಪಾರ್ಟಿ ನಡೆಯುತ್ತಿತ್ತು. ಹೈಟೆಕ್ ಸ್ವಿಮ್ಮಿಂಗ್ ಪೂಲ್ ವ್ಯವಸ್ಥೆಯೊಂದಿಗೆ ಬಹುತೇಕ ರೇವ್ ಪಾರ್ಟಿಯ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಾಳಿಯ ವೇಳೆ ಗಾಂಜಾ, ಎಂಡಿಎಂಎ, ವಿದೇಶಿ ಮದ್ಯ ಹಾಗೂ ನಿಷೇಧಿತ ಹುಕ್ಕಾಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪಾರ್ಟಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ನಡೆಯುತ್ತಿತ್ತು. ಕೇವಲ 50 ಜೋಡಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. FV Social 404 ಮತ್ತು Hopzyx ಆ್ಯಪ್‌ಗಳ ಮೂಲಕ ಪಾರ್ಟಿ ಆಯೋಜಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಪಾರ್ಟಿಯಲ್ಲಿ ಭಾಗವಹಿಸಲು ಪ್ರತ್ಯೇಕ ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ಯುವಕರಿಗೆ 1,710 ರೂ., ಯುವತಿಯರಿಗೆ 1,080 ರೂ. ಹಾಗೂ ಜೋಡಿಗಳಿಗೆ 2,400 ರೂ. ಪ್ರವೇಶ ಶುಲ್ಕ ವಿಧಿಸಲಾಗಿತ್ತು.
ದಾಳಿ ನಡೆಸಿದ ಸಿಸಿಬಿ ಪೊಲೀಸರು ಸ್ವಿಮ್ಮಿಂಗ್ ಪೂಲ್ ಪಾರ್ಟಿ ಆಯೋಜಕರಾದ ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ ಎಂಬುವವರನ್ನ ಬಂಧಿಸಿದ್ದಾರೆ. ಪಾರ್ಟಿ ನಡೆಯುತ್ತಿದ್ದ ವಿಲ್ಲಾದಲ್ಲಿ ಪತ್ತೆಯಾದ ನಿಷೇಧಿತ ವಸ್ತುಗಳನ್ನ ವಶಕ್ಕೆ ಪಡೆದು ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪಾರ್ಟಿಯ ಆಯೋಜನೆ, ಮಾದಕ ವಸ್ತುಗಳ ಬಳಕೆ ಹಾಗೂ ಪೂರೈಕೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

