ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಗುರುವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಸಮ್ಮುಖದಲ್ಲಿ ಒಟ್ಟು 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ 23 ಮಂದಿಯಲ್ಲಿ 19 ಶಾಸಕರು ವಿಜಯ್ ಅವರ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ನಿಂದ (TVK) ಬಂದವರಾಗಿದ್ದಾರೆ. ಇಬ್ಬರು ಶಾಸಕರು ಮೈತ್ರಿ ಪಕ್ಷವಾದ ಕಾಂಗ್ರೆಸ್ನಿಂದ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.ಮಿತ್ರಪಕ್ಷಗಳಾದ ವಿದುತಲೈ ಚಿರುತೈಗಳ್ ಕಚ್ಚಿ (VCK) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಗಾಗಿ ತಲಾ ಒಂದು ಸಚಿವ ಸ್ಥಾನವನ್ನು ಕಾಯ್ದಿರಿಸಲಾಗಿದೆ. ಈ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಇನ್ನೂ ಅಂತಿಮಗೊಳಿಸಬೇಕಿದೆ.
ಸಂವಿಧಾನದ ಪ್ರಕಾರ ಒಟ್ಟು 35 ಸಚಿವರನ್ನು ನೇಮಕ ಮಾಡಬಹುದು. ಈಗ 23 ಹೊಸ ಸಚಿವರು ಸೇರ್ಪಡೆಯಾಗಿರುವುದರಿಂದ, ಸಚಿವ ಸಂಪುಟದ ಒಟ್ಟು ಬಲ 32ಕ್ಕೆ ಏರಿದೆ. ಇನ್ನೂ ಮೂರು ಸ್ಥಾನಗಳು ಖಾಲಿ ಇವೆ.ಸಮಾರಂಭದ ಆರಂಭದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಮತ್ತು ನಂತರ ತಮಿಳು ನಾಡಗೀತೆಯನ್ನು ಪಠಿಸಲಾಯಿತು.
ಮೈತ್ರಿಕೂಟಕ್ಕೆ ಆಹ್ವಾನ: ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ವಿ.ಸಿ.ಕೆ, ಸಿಪಿಐ (CPI) ಮತ್ತು ಸಿಪಿಎಂ (CPM) ಪಕ್ಷಗಳನ್ನೂ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು ಟಿವಿಜೆ ನಾಯಕತ್ವ ಬಯಸಿದೆ. ಈ ಕುರಿತು ಮುಖ್ಯಮಂತ್ರಿಗಳು ಈಗಾಗಲೇ ಆಹ್ವಾನ ನೀಡಿದ್ದಾರೆ ಎಂದು ರಾಜ್ಯ ಸಾರ್ವಜನಿಕ ಕಾರ್ಯ ಮತ್ತು ಕ್ರೀಡಾ ಸಚಿವ ಆಧವ್ ಅರ್ಜುನ ತಿಳಿಸಿದ್ದಾರೆ.
ಮೇ 10 ರಂದು ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒಂಬತ್ತು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸಂಪುಟ ವಿಸ್ತರಣೆಯ ಮೂಲಕ ವಿಜಯ್ ನೇತೃತ್ವದ ಸರಕಾರ ಇನ್ನಷ್ಟು ಬಲಗೊಂಡಿದೆ.

