ಪ್ರಧಾನಿ ನರೇಂದ್ರ ಮೋದಿ ಅವರ ಐದು ದೇಶಗಳ ಯಶಸ್ವಿ ವಿದೇಶಿ ಪ್ರವಾಸದ ಅಂತಿಮ ಹಂತದಲ್ಲಿ ಭಾರತ ಮತ್ತು ಇಟಲಿ ನಡುವಿನ ಬಾಂಧವ್ಯಕ್ಕೆ ಮತ್ತೊಂದು ಹಸಿರು ಸಾಕ್ಷಿ ಸಿಕ್ಕಿದೆ. ಪರಿಸರ ಜಾಗೃತಿ ಮೂಡಿಸುವ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ “ಏಕ್ ಪೇಡ್ ಮಾ ಕೆ ನಾಮ್” (ಅಮ್ಮನ ಹೆಸರಲ್ಲಿ ಒಂದು ಗಿಡ) ಅಭಿಯಾನದ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ರೋಮ್‌ನಲ್ಲಿ ಜಂಟಿಯಾಗಿ ಬ್ಲಾಕ್ ಮಲ್ಬೆರಿ (Black Mulberry) ಗಿಡವನ್ನು ನೆಟ್ಟಿದ್ದಾರೆ.
ಏನಿದು ಕೃಷ್ಣ ತೂತ್ ಗಿಡದ ವಿಶೇಷತೆ?
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ‘ಕೃಷ್ಣ ತೂತ್’ ಎಂದು ಕರೆಯಲ್ಪಡುವ ಈ ಕಪ್ಪು ಮಲ್ಬೆರಿ ಸಸ್ಯವು ಕೇವಲ ಒಂದು ಗಿಡವಲ್ಲ ಇದು ತನ್ನ ಅಡುಗೆ (Culinary), ಔಷಧೀಯ (Medicinal) ಮತ್ತು ಸಾಂಸ್ಕೃತಿಕ ಮಹತ್ವದ ಮೂಲಕ ಭಾರತ ಮತ್ತು ಇಟಲಿ ದೇಶಗಳನ್ನು ಬೆಸೆಯುವ ಸುಂದರ ಕೊಂಡಿಯಾಗಿದೆ. ಈ ಗಿಡ ನೆಡುವ ಮೂಲಕ ಉಭಯ ದೇಶಗಳು ಜಾಗತಿಕವಾಗಿ ಪರಿಸರ ಪ್ರಜ್ಞೆ ಮತ್ತು ಸುಸ್ಥಿರ ಜೀವನ ಶೈಲಿಯನ್ನು ಉತ್ತೇಜಿಸಿವೆ.
ವಿಶೇಷ ವ್ಯೂಹಾತ್ಮಕ ಪಾಲುದಾರಿಕೆ ಗೆ (Special Strategic Partnership) ಜಿಗಿತ
ಪ್ರಧಾನಿ ಮೆಲೋನಿ ಅವರೊಂದಿಗಿನ ಮಾತುಕತೆ ಅತ್ಯಂತ ಅದ್ಭುತವಾಗಿತ್ತು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಭಾರತ-ಇಟಲಿ ನಡುವಿನ ಸ್ನೇಹವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮೆಲೋನಿ ಅವರ ಬದ್ಧತೆ ಶ್ಲಾಘನೀಯ ಎಂದಿರುವ ಮೋದಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಈಗ ವಿಶೇಷ ವ್ಯೂಹಾತ್ಮಕ ಪಾಲುದಾರಿಕೆ ಮಟ್ಟಕ್ಕೆ ಏರಿಸಲಾಗಿದೆ ಎಂದು ಘೋಷಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ, ಬಾಹ್ಯಾಕಾಶ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ದೇಶಗಳು ಜಂಟಿಯಾಗಿ ಭಾರಿ ಪ್ರಗತಿ ಸಾಧಿಸಿವೆ. ಇನ್ನು ಮುಂದೆ ಉಭಯ ದೇಶಗಳ ನಾಯಕರು ಜಾಗತಿಕ ಶೃಂಗಸಭೆಗಳ ನಡುವೆ ವಾರ್ಷಿಕ ಸಭೆಗಳನ್ನು ಹಾಗೂ ನಿಯಮಿತವಾಗಿ ಸಚಿವ ಮಟ್ಟದ ಸಭೆಗಳನ್ನು ನಡೆಸಲು ಒಪ್ಪಿಕೊಂಡಿದ್ದಾರೆ.
2029ರ ವೇಳೆಗೆ 20 ಬಿಲಿಯನ್ ಯುರೋ ವ್ಯಾಪಾರದ ಬಿಗ್ ಟಾರ್ಗೆಟ್
ಜಾಗತಿಕ ರಾಜಕೀಯ ವ್ಯವಸ್ಥೆಯು ಭಾರಿ ಬದಲಾವಣೆಗಳಿಗೆ ಒಳಗಾಗುತ್ತಿರುವ ಈ ಸಮಯದಲ್ಲಿ, ಭಾರತ ಮತ್ತು ಇಟಲಿ ಜಂಟಿಯಾಗಿ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿವೆ ಎಂದು ಜಾರ್ಜಿಯಾ ಮೆಲೋನಿ ಹೇಳಿದ್ದಾರೆ.
ಉಭಯ ನಾಯಕರು ಜಂಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ 2025-2029 ರ ಜಂಟಿ ವ್ಯೂಹಾತ್ಮಕ ಕ್ರಿಯಾ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು. ರಕ್ಷಣೆ, ಭದ್ರತೆ, ಕೃತಕ ಬುದ್ಧಿಮತ್ತೆ (AI), ಇಂಧನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ವಿಶೇಷವಾಗಿ, 2029 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 20 ಬಿಲಿಯನ್ ಯುರೋಗಳಿಗೆ ವಿಸ್ತರಿಸುವ ಹಂಚಿಕೊಂಡ ಗುರಿಯನ್ನು ತಲುಪಲು ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವನ್ನು (India-EU Free Trade Agreement) ಶೀಘ್ರವಾಗಿ ಜಾರಿಗೊಳಿಸಲು ಉಭಯ ನಾಯಕರು ಕರೆ ನೀಡಿದ್ದಾರೆ.
ಮೇ 15 ರಿಂದ ಆರಂಭವಾದ ಪ್ರಧಾನಿ ಮೋದಿಯವರ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳ 5 ದಿನಗಳ ಸುದೀರ್ಘ ಪ್ರವಾಸವು ಈ ಐತಿಹಾಸಿಕ ಭೇಟಿಯೊಂದಿಗೆ ಮುಕ್ತಾಯಗೊಂಡಿದೆ.

