ತಮಿಳುನಾಡು ವಿಧಾನಸಭಾ ಚುನಾವಣೆ 2026ರ ದಿನಾಂಕ ಘೋಷಣೆ ಮಾಡಲು ದಿನಗಣನೆ ಆರಂಭವಾಗಿದೆ. ರಾಜ್ಯದ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆ ತಯಾರಿ ಆರಂಭಿಸಿವೆ. ರಾಜ್ಯದ 234 ಸ್ಥಾನಗಳಿಗೆ ಮಾರ್ಚ್ ಅಂತ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುವ ನಿರೀಕ್ಷೆ ಇದೆ.
ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ನಟ ವಿಜಯ್ ಸ್ಥಾಪನೆ ಮಾಡಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿ ಹಬ್ಬಿದೆ. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಈ ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಮಾತನಾಡಿ, “ಟಿವಿಕೆ ಜೊತೆಗಿನ ಮೈತ್ರಿಯ ಕುರಿತು ಬಿಜೆಪಿಯ ಕೇಂದ್ರ ನಾಯಕತ್ವ ತೀರ್ಮಾನವನ್ನು ಕೈಗೊಳ್ಳಲಿದೆ” ಎಂದು ಹೇಳಿದ್ದಾರೆ.
“ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವನ್ನು ಮೈತ್ರಿ ಮಾತುಕತೆಗೆ ಆಹ್ವಾನ ನೀಡಿದ ಕಾರ್ಯಕರ್ತರನ್ನು ಪಕ್ಷದಿಂದ ಹೊರ ಹಾಕಿರುವುದು ಪಕ್ಷದ ಆಂತರಿಕ ವಿಚಾರವಾಗಿದೆ. ಮೈತ್ರಿಯ ಬಗ್ಗೆ ಕೇಂದ್ರ ನಾಯಕರು ತೀರ್ಮಾನ ಮಾಡಲಿದ್ದಾರೆ” ಎಂದರು.
“ಮುಖ್ಯಮಂತ್ರಿ ಯಾರಾಗಬೇಕು? ಎಂದು ರಾಜ್ಯದ ಜನರು ತೀರ್ಮಾನ ಮಾಡುತ್ತಾರೆ. ಎಂ.ಕೆ.ಸ್ಟಾಲಿನ್ ಈ ಬಗ್ಗೆ ತೀರ್ಮಾನ ಮಾಡಲು ಆಗುವುದಿಲ್ಲ. ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 200ಕ್ಕೂ ಅಧಿಕ ಸೀಟುಗಳಲ್ಲಿ ಜಯಗಳಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಐಎಡಿಎಂಕೆ ಹೇಳುವುದೇನು?: ಇನ್ನು ಈ ಕುರಿತು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮುನುಸ್ವಾಮಿ ಮಾತನಾಡಿ, “ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಎಐಎಡಿಎಂಕೆ-ಬಿಜೆಪಿಯ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಹೊಸ ಪ್ರಯತ್ನಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ” ಎಂದರು.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಟಿವಿಕೆ ಪಕ್ಷದ ಮಹಿಳಾ ಪರ ಘೋಷಣೆಗಳ ಬಗ್ಗೆ ಸಾಧಾರಣವಾಗಿ ಪ್ರತಿಕ್ರಿಯಿಸಿದ್ದನ್ನು ಉಲ್ಲೇಖಿಸಿದ ಅವರು, “ಪಳನಿಸ್ವಾಮಿ ಅವರು ಇತರ ಯಾವುದೇ ಪಕ್ಷದ ನಾಯಕರಂತೆ ವಿಜಯ್ ಅವರು ಕೂಡ ಚುನಾವಣಾ ಪೂರ್ವದಲ್ಲಿ ಈ ಘೋಷಣೆಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.
ತಮಿಳುನಾಡು ಬಿಜೆಪಿ ವಕ್ತಾರ ಎ.ಎನ್.ಎಸ್. ಪ್ರಸಾದ್, ಡಿಎಂಕೆ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಡೆಯಲು ಎನ್‌ಡಿಎ ಒಕ್ಕೂಟ ಸೇರುವ ಬಗ್ಗೆ ಯೋಚಿಸುವಂತೆ ಟಿವಿಕೆ ಮುಖ್ಯಸ್ಥರಿಗೆ ಮನವಿ ಮಾಡಿದ್ದರು. ಆದ್ದರಿಂದ ಮತ್ತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಸುದ್ದಿಗಳು ಹಬ್ಬಿವೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ನಟ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ 234 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದೆ.

