HomeKarnatakaವಾಹನ ಸವಾರರಿಗೆ ವಂಚನೆ: ಪ್ರತಿ ಪೆಟ್ರೋಲ್ ಬಂಕ್ ನಲ್ಲಿಯೂ ಎಥೆನಾಲ್ ಮಿಶ್ರಣದ ಪ್ರಮಾಣ ಬಹಿರಂಗಪಡಿಸಿ: ಡಿಸಿಎಂ...

ವಾಹನ ಸವಾರರಿಗೆ ವಂಚನೆ: ಪ್ರತಿ ಪೆಟ್ರೋಲ್ ಬಂಕ್ ನಲ್ಲಿಯೂ ಎಥೆನಾಲ್ ಮಿಶ್ರಣದ ಪ್ರಮಾಣ ಬಹಿರಂಗಪಡಿಸಿ: ಡಿಸಿಎಂ ಪರಮೇಶ್ವರ್ ಒತ್ತಾಯ

ಬೆಂಗಳೂರು: ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿರುವ ಬಗ್ಗೆ ಕರ್ನಾಟಕದ ಪರೀಕ್ಷಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ತಕ್ಷಣ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ಪೆಟ್ರೋಲ್ ಬಂಕ್‌ನಲ್ಲಿಯೂ ಎಥೆನಾಲ್ ಮಿಶ್ರಣದ ಪ್ರಮಾಣ ಬಹಿರಂಗಪಡಿಸಬೇಕು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ.

ಪೆಟ್ರೋಲ್‌ ನಲ್ಲಿ ಶೇ.20ರಷ್ಟು ಎಥೆನಾಲ್ (E20) ಮಿಶ್ರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಖರೀದಿಯನ್ನು ಜನರಿಗೆ ಅನಿವಾರ್ಯವಾಗಿಸಿದೆ. ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದು ಹಾಗೂ ಎಥೆನಾಲ್ ಬಳಕೆಗೆ ಹೊಂದಿಕೆಯಾಗದ ಹಳೆಯ ವಾಹನಗಳಿಗೆ ಸಮಸ್ಯೆಯಾಗುವ ಆತಂಕಗಳಿದ್ದರೂ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಜನರ ಮೇಲೆ ಹೇರಿದೆ. ಇದೀಗ ಕರ್ನಾಟಕ ಸರ್ಕಾರ ನಡೆಸಿರುವ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ವಿಚಾರಗಳು ವಾಹನ ಸವಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ದೂರಿದ್ದಾರೆ.

ನಮ್ಮ ಸರ್ಕಾರವು ಸ್ವತಂತ್ರ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಮುಖ ತೈಲ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ ನಲ್ಲಿ ಶೇ.31.2ರವರೆಗೆ ಎಥೆನಾಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ. ರಾಜ್ಯದ ಏಳು ಜಿಲ್ಲೆಗಳ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಎಥೆನಾಲ್ ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

E20 ಪೆಟ್ರೋಲ್‌ನಿಂದ ಕೆಲವು ವಾಹನಗಳ ಮೈಲೇಜ್ ಕಡಿಮೆಯಾಗಬಹುದು ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಹೀಗಿರುವಾಗ ಎಥೆನಾಲ್ ಪ್ರಮಾಣ ಶೇ.30 ದಾಟಿದರೆ ಏನಾಗಬಹುದು? ಹೆಚ್ಚುವರಿ ಇಂಧನ ವೆಚ್ಚ ಹಾಗೂ ವಾಹನಗಳಿಗೆ ಉಂಟಾಗುವ ತೊಂದರೆಯ ಹೊಣೆಯನ್ನು ಯಾರು ಹೊರಬೇಕು? ಕೇಂದ್ರದ ವೈಫಲ್ಯಕ್ಕೆ ಸಾಮಾನ್ಯ ವಾಹನ ಸವಾರರು ಬೆಲೆ ತೆರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭವಾಗುತ್ತದೆ ಎನ್ನುವ ಕೇಂದ್ರ ಸರ್ಕಾರವೇ ಹೊಸ ಖರೀದಿ ಟೆಂಡರ್‌ ನಲ್ಲಿ ಕಬ್ಬಿನ ರಸ, ಸಕ್ಕರೆ ಪಾಕ ಹಾಗೂ ಬಿ-ಹೆವಿ ಮೊಲಾಸಿಸ್‌ ನಿಂದ ತಯಾರಿಸುವ ಎಥೆನಾಲ್ ಅನ್ನು ಹೊರಗಿಟ್ಟಿದೆ. ಇದು ಮೋದಿ ಸರ್ಕಾರದ ದ್ವಂದ್ವ ನಿಲುವಾಗಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದ ರೈತರು ತೀವ್ರ ಬರದಿಂದ ಸಂಕಷ್ಟದಲ್ಲಿರುವಾಗ ಕಬ್ಬಿನಿಂದ ತಯಾರಿಸುವ ಎಥೆನಾಲ್‌ಗೆ ಮಾರುಕಟ್ಟೆಯ ಅವಕಾಶವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡುತ್ತಿದೆ. ಮತ್ತೊಂದೆಡೆ, ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಗಾದರೆ ರೈತರಿಗೆ ನೀಡಿದ್ದ ಲಾಭದ ಭರವಸೆ ಏನಾಯಿತು? ವಾಹನ ಸವಾರರ ಹಿತಾಸಕ್ತಿಗೆ ರಕ್ಷಣೆ ಎಲ್ಲಿದೆ? ಇದು ರೈತರು ಮತ್ತು ಗ್ರಾಹಕರು ಇಬ್ಬರನ್ನೂ ವಂಚಿಸುವ ಕೆಲಸವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವೇ ಶೇ.20ರ ಮಿತಿ ನಿಗದಿಪಡಿಸಿರುವಾಗ ಶೇ.30ಕ್ಕಿಂತ ಹೆಚ್ಚು ಎಥೆನಾಲ್ ಇರುವ ಪೆಟ್ರೋಲ್ ಹೇಗೆ ಮಾರಾಟವಾಗುತ್ತಿದೆ? ತೈಲ ಕಂಪನಿಗಳ ಮೇಲೆ ನಿಗಾ ವಹಿಸುತ್ತಿರುವವರು ಯಾರು? ಇದರ ಹೊಣೆ ಯಾರು? ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಜನತೆಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಪರೀಕ್ಷಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ತಕ್ಷಣ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ಪೆಟ್ರೋಲ್ ಬಂಕ್‌ನಲ್ಲಿಯೂ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಬಹಿರಂಗಪಡಿಸಬೇಕು. ಗ್ರಾಹಕರ ಹಿತಾಸಕ್ತಿ ಹಾಗೂ ವಾಹನಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ,

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular