ತಮಿಳುನಾಡು ವಿಧಾನಸಭಾ ಚುನಾವಣೆ 2026ರ ವೇಳಾಪಟ್ಟಿ ಯಾವುದೇ ಕ್ಷಣದಲ್ಲಿ ಘೋಷಣೆಯಾಗಲಿದೆ. ರಾಜ್ಯದ 234 ಸ್ಥಾನಗಳಿಗೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ರಾಜ್ಯದ ಹಾಲಿ ಆಡಳಿತ ಪಕ್ಷ ಡಿಎಂಕೆ. ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿ.
ದ್ರಾವಿಡ ಮುನ್ನೇಟ್ರಾ ಕಳಗಂ (ಡಿಎಂಕೆ) ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ)ನಲ್ಲಿ ಕಾಂಗ್ರೆಸ್ ಸೇರಿದಂತೆ 21 ಪಕ್ಷಗಳಿವೆ. ಮೈತ್ರಿ ಪಕ್ಷಗಳಿಗೆ ಸೀಟು ಹಂಚಿಕೆ ಮಾಡುತ್ತಿರುವ ಡಿಎಂಕೆ ಸೀಟು ಹಂಚಿಕೆ ಸವಾಲು ಎದುರಿಸುತ್ತಿದೆ.
ಮೈತ್ರಿಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್‌ಗೆ 27 ಸೀಟು ನೀಡುವುದಾಗಿ ಡಿಎಂಕೆ ಭರವಸೆ ನೀಡಿದೆ. ಚಿಕ್ಕಪುಟ್ಟ ಪಕ್ಷಗಳಿಗೆ 4, 6 ಎಂದು ಸೀಟುಗಳನ್ನು ಹಂಚಿಕೆ ಮಾಡುತ್ತಿದೆ. ಡಿಎಂಕೆ ಪಕ್ಷದ ಅಭ್ಯರ್ಥಿಗಳು ಎಷ್ಟು ಸೀಟುಗಳಲ್ಲಿ ಕಣಕ್ಕಿಳಿಯಲಿದ್ದಾರೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಸೀಟು ಹಂಚಿಕೆಯಲ್ಲಿ ಸ್ಟಾಲಿನ್ ಬ್ಯುಸಿ: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಡಿಎಂಕೆ ಮೈತ್ರಿಕೂಟದಲ್ಲಿ ಎಂಡಿಎಂಕೆ ಪಕ್ಷಕ್ಕೆ 4 ಸೀಟುಗಳನ್ನು ಹಂಚಿಕೆ ಮಾಡಿದ್ದಾರೆ. ಸೀಟು ಹಂಚಿಕೆಯ ಮಾತುಕತೆ ಚುರುಕುಗೊಳಿಸಿದ್ದು, ಎಂಡಿಎಂಕೆ ಪಕ್ಷಕ್ಕೆ ಸೀಟು ಹಂಚಲಾಗಿದೆ.
ಮೈತ್ರಿಕೂಟದಲ್ಲಿ ಒಟ್ಟು 21 ಪಕ್ಷಗಳಿದ್ದು, ಮೈತ್ರಿಕೂಟದ ನಾಯಕತ್ವ ವಹಿಸಿರುವ ಡಿಎಂಕೆ ಪ್ರತಿಯೊಂದು ಪಕ್ಷದೊಂದಿಗೆ ಮಾತುಕತೆ ನಡೆಸಿ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ.
ಎಂಎಂಕೆ ಮತ್ತು ಐಯುಎಂಎಲ್ ಪಕ್ಷಗಳಿಗೆ ತಲಾ 2 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. ನಂತರ, ಸುದೀರ್ಘ ಮಾತುಕತೆಯ ಬಳಿಕ ಕಾಂಗ್ರೆಸ್‌ಗೆ 27 ಅಥವ 28 ಸೀಟು ನೀಡುವುದಾಗಿ ಅಲ್ಲದೇ 1 ರಾಜ್ಯಸಭಾ ಸ್ಥಾನವನ್ನು ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಡಿಎಂಕೆ ಪಕ್ಷಗಳಿಗೆ ಇಷ್ಟು ಸೀಟು ಎಂದು ಒಪ್ಪಂದ ಮಾಡಿಕೊಳ್ಳುತ್ತಿದೆ. ಆದರೆ ಯಾವ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿಲ್ಲ. ಅದನ್ನು ಚುನಾವಣಾ ಸಮಿತಿ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟವಾಗಿ ತಿಳಿಸುತ್ತಿದೆ.
ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಾದ ‘ಅಣ್ಣಾ ಅರಿವಾಲಯಂ’ನಲ್ಲಿ ಡಿಎಂಕೆ ಮತ್ತು ಇತರ ಪಕ್ಷಗಳ ಸೀಟು ಹಂಚಿಕೆಯ ಮಾತುಕತೆಗಳು ನಡೆಯುತ್ತಿವೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿಯೇ ಚರ್ಚೆಗಳನ್ನು ಮಾಡಲಾಗುತ್ತಿದೆ.
ಸೀಟು ಹಂಚಿಕೆ ಬಳಿಕ ಬೇರೆ ಪಕ್ಷದ ಅಭ್ಯರ್ಥಿಗಳು ಡಿಎಂಕೆಯ ‘ಉದಯಸೂರ್ಯ’ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಲು ಸಹ ಆಯ್ಕೆಯನ್ನು ನೀಡಲಾಗುತ್ತಿದೆ. ಒಂದು ವೇಳೆ ಅಭ್ಯರ್ಥಿಗಳು ಬಯಸಿದರೆ ತಮ್ಮ ಪಕ್ಷದ ಸ್ವಂತ ಚಿಹ್ನೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ.
ಡಿಎಂಕೆ 2021ರ ವಿಧಾನಸಭಾ ಚುನಾವಣೆಯಲ್ಲಿ ಎಂಡಿಎಂಕೆ ಪಕ್ಷಕ್ಕೆ 6 ಸೀಟುಗಳನ್ನು ನೀಡಿತ್ತು. ಆ ಪೈಕಿ ಎಂಡಿಎಂಕೆ 4 ಸೀಟುಗಳಲ್ಲಿ ಜಯಗಳಿಸಿತ್ತು. ಈ ಬಾರಿ ಡಿಎಂಕೆ ಮೈತ್ರಿಕೂಟದಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷಗಳಿರುವುದರಿಂದ, ಎಲ್ಲಾ ಮಿತ್ರಪಕ್ಷಗಳಿಗೂ ಅವಕಾಶ ನೀಡುವ ಉದ್ದೇಶದಿಂದ ಕಳೆದ ಬಾರಿಗಿಂತ ಈ ಬಾರಿಗಿಂತ ಕಡಿಮೆ ಸೀಟು ಹಂಚಿಕೆ ಮಾಡಲಾಗುತ್ತಿದೆ.

