ಕಾಬೂಲ್: ತಾಲಿಬಾನ್ ಆಡಳಿತದ ಆಫ್ಘಾನಿಸ್ತಾನದಲ್ಲಿ ಪತ್ನಿಗೆ ಮನ ಬಂದಂತೆ ಹೊಡೆಯಬಹುದು, ಕೌಟುಂಬಿಕ ದೌರ್ಜನ್ಯ ಈಗ ಆಫ್ಘಾನಿಸ್ತಾನದಲ್ಲಿ ಕಾನೂನು ಬದ್ಧವಾಗಿದೆ. ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕಸಿದುಕೊಳ್ಳಲು ಆಫ್ಘಾನಿಸ್ತಾನದಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ.
ಆಘಾತಕಾರಿ ಬೆಳವಣಿಗೆಯಲ್ಲಿ ತಾಲಿಬಾನ್ ತಾಲಿಬಾನ್ ಹೊಸ ಕಾನೂನು ಪರಿಚಯಿಸಿದೆ. ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆಯನ್ನು ಕಾನೂನುಬದ್ಧಗೊಳಿಸಿದೆ. ಮೂಳೆಗಳು ಮುರಿಯದ ರೀತಿಯಲ್ಲಿ ತನ್ನ ಪತ್ನಿ ಮತ್ತು ಮಕ್ಕಳನ್ನು ಶಿಕ್ಷಿಸಲು ವ್ಯಕ್ತಿಗೆ ಈ ಕಾನೂನು ಅವಕಾಶ ಮಾಡಿಕೊಡುತ್ತದೆ. ಇದರಿಂದಾಗಿ ಅಫ್ಘಾನಿಸ್ತಾನ ಮಹಿಳೆಯರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ.
ತಾಲಿಬಾನಿಗಳ ಹೊಸ ಕಾನೂನಿನ ಅನ್ವಯ ಪತ್ನಿಯು ದಾಸಿಯಾಗಿದ್ದು, ಆಕೆಗೆ ಹೊಡೆಯುವ ಸಂಪೂರ್ಣ ಅಧಿಕಾರವನ್ನು ಪತಿಗೆ ನೀಡಲಾಗಿದೆ. ತಾಲಿಬಾನ್ ಆಡಳಿತದ ಸರ್ವೋಚ್ಚ ನಾಯಕ ಅಖುಂಡ್ ಜಾದಾ ಸಹಿ ಮಾಡಿರುವ ಕಾನೂನು ಪ್ರಕಾರ, ಸಣ್ಣ ತಪ್ಪು ಮಾಡಿದಾಗ ಪತ್ನಿಗೆ ಹೊಡೆಯಲು ಪತ್ನಿಗೆ ಹಾಗೂ ಮಕ್ಕಳನ್ನು ಥಳಿಸಲು ತಂದೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.
ಒಂದು ವೇಳೆ ಪತಿ ಮೂಳೆ ಮುರಿಯುವಂತೆ ಪತ್ನಿಗೆ ಥಳಿಸಿದರೆ ಗರಿಷ್ಠ 15 ದಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ವಿವಾಹಿತ ಮಹಿಳೆ ತನ್ನ ಪತಿಯ ಅನುಮತಿ ಇಲ್ಲದೆ ಸಂಬಂಧಿಕರನ್ನು ಭೇಟಿ ಮಾಡಿದರೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಿದೆ. ಅಲ್ಲದೇ, ತನ್ನ ವಿರುದ್ಧದ ಕೌಟುಂಬಿಕ ಹಿಂಸೆಯನ್ನು ಸಾಬೀತುಪಡಿಸಲು ಕಡ್ಡಾಯವಾಗಿ ತನ್ನ ಪತಿಯ ಜೊತೆಗೆ ಆಕೆಯು ನ್ಯಾಯಾಲಯಕ್ಕೆ ಬರಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ.

