ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 35 ರನ್‌ಗಳ ಗೆಲುವನ್ನು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಸ್ಕಾಟ್ಲೆಂಡ್‌ಗೆ 183 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಸ್ಕಾಟ್ಲೆಂಡ್ 18.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲ್‌ಔಟ್ ಆಯಿತು.
ವೆಸ್ಟ್ ಇಂಡೀಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಬ್ರೇಡನ್ ಕಿಂಗ್ 35, ಶಾಯ್ ಹೋಪ್ 19 ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮೇರ್ 36 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 64 ರನ್ ಬಾರಿಸಿ ಹಲವು ತಿಂಗಳುಗಳ ಬಳಿಕ ಕಮ್‌ಬ್ಯಾಕ್ ಮಾಡಿದರು. ಇನ್ನುಳಿದಂತೆ ರೋವ್‌ಮನ್ ಪೊವೆಲ್ 24, ಶೆರ್ಫೇನ್ ರುದರ್‌ಫೋರ್ಡ್ 26, ರೊಮಾರಿಯಾ ಶೆಫರ್ಡ್ ಅಜೇಯ 6 ಹಾಗೂ ಮ್ಯಾಥ್ಯೂ ಫೋರ್ಡ್ ಅಜೇಯ 1 ರನ್ ಬಾರಿಸಿದರು.
ಸ್ಕಾಟ್ಲೆಂಡ್ ಪರ ಬ್ರಾಡ್ ಕರೀ ಎರಡು ವಿಕೆಟ್, ಶಫ್ಯಾನ್ ಶರೀಫ್, ಓಲಿವರ್ ಡೇವಿಡ್‌ಸನ್ ಹಾಗೂ ಮೈಕೆಲ್ ಲೀಸ್ಕ್ ತಲಾ ಒಂದೊಂದು ವಿಕೆಟ್ ಪಡೆದರು.
ಸ್ಕಾಟ್ಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜಾರ್ಜ್ ಮುನ್ಸೆ 19 ಹಾಗೂ ಮೈಕೆಲ್ ಜೋನ್ಸ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಅಲ್ಲದೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೆಂಡನ್ ಮೆಕ್‌ಮುಲೆನ್ 14 ರನ್ ಗಳಿಸಿ ಔಟ್ ಆದರು. ಈ ಮೂಲಕ ಕೇವಲ 37 ರನ್‌ಗೆ 3 ವಿಕೆಟ್ ಕಳೆದುಕೊಂಡ ಸ್ಕಾಟ್ಲೆಂಡ್ ನಾಯಕ ರಿಚಿ ಬೆರಿಂಗ್ಟನ್ ಹಾಗೂ ಟಾಮ್ ಬ್ರೂಸ್ 78 ರನ್‌ಗಳ ಜತೆಯಾಟವನ್ನಾಡುವ ಮೂಲಕ ಸುಧಾರಣೆ ತಂದರು. ಬೆರಿಂಗ್ಟನ್ 42 ರನ್ ಗಳಿಸಿದರೆ, ಬ್ರೂಸ್ 35 ರನ್ ಗಳಿಸಿದರು. ಇನ್ನುಳಿದಂತೆ ಮ್ಯಾಥ್ಯೂ ಕ್ರಾಸ್ 11, ಮಾರ್ಕ್ ವ್ಯಾಟ್ 15, ಮೈಕೆಲ್ ಲೀಸ್ಕ್ ಡಕ್‌ಔಟ್, ಓಲಿವರ್ ಡೇವಿಡ್‌ಸನ್ ಡಕ್‌ಔಟ್, ಸಫ್ಯಾನ್ ಶರೀಫ್ ಡಕ್‌ಔಟ್ ಹಾಗೂ ಬ್ರಾಡ್ ಕರೀ ಅಜೇಯ 2 ರನ್ ಕಲೆಹಾಕಿದರು. ಹೀಗೆ 115 ರನ್‌ಗೆ 4 ವಿಕೆಟ್ ಮಾತ್ರ ಕಳೆದುಕೊಂಡಿದ್ದ ಸ್ಕಾಟ್ಲೆಂಟ್ ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕದ ವಿಫಲತೆಯಿಂದ 147 ರನ್‌ಗೆ ಆಲ್‌ಔಟ್ ಆಯಿತು.
ವೆಸ್ಟ್ ಇಂಡೀಸ್ ಪರ ರೊಮಾರಿಯೊ ಶೆಫರ್ಡ್ ಐದು ವಿಕೆಟ್, ಜೇಸನ್ ಹೋಲ್ಡರ್ ಮೂರು ವಿಕೆಟ್, ಶಮನ್ ಜೋಸೆಫ್ ಹಾಗೂ ಗುಡಕೇಶ್ ಮೋಟಿ ತಲಾ ಒಂದೊಂದು ವಿಕೆಟ್ ಪಡೆದರು.

