HomeLatest NewsT20 World Cup 2026: ಬಿದ್ದ ತಂಡದ ಕೈಹಿಡಿದ ಸೂರ್ಯ, ಬೌಲರ್ಸ್; ಯುಎಸ್ ವಿರುದ್ಧ ಗೆದ್ದ...

T20 World Cup 2026: ಬಿದ್ದ ತಂಡದ ಕೈಹಿಡಿದ ಸೂರ್ಯ, ಬೌಲರ್ಸ್; ಯುಎಸ್ ವಿರುದ್ಧ ಗೆದ್ದ ಭಾರತ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಮೂರನೇ ಪಂದ್ಯದಲ್ಲಿ ಭಾರತ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ 29 ರನ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಫೀಲ್ಡಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಗೆ 162 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಅಮೆರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕಿತು.

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಡಕ್‌ಔಟ್ ಆಗುವ ಮೂಲಕ ಭಾರತ ಆರಂಭಿಕ ಆಘಾತ ಅನುಭವಿಸಿತು. ಮತ್ತೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಸಹ 20 ರನ್‌ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ 25 ರನ್‌ಗೆ ಔಟ್ ಆದರು. ಬೆನ್ನಲ್ಲೇ ಶಿವಮ್ ದುಬೆ ಡಕ್‌ಔಟ್ ಆದರು. ಇಪ್ಪತ್ತು ರನ್ ಮುಟ್ಟಿದ್ದ ಇಶನ್, ತಿಲಕ್ ಹಾಗೂ ದುಬೆ ಆರನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಭಾರಿ ಆಘಾತ ಉಂಟುಮಾಡಿತು. ಈ ಮೂಲಕ ಭಾರತ ಕೇವಲ 46 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಬಳಿಕ ಕಣಕ್ಕಿಳಿದ ರಿಂಕು ಸಿಂಗ್ 6 ರನ್, ಹಾರ್ದಿಕ್ ಪಾಂಡ್ಯ 5 ರನ್‌ಗೆ ವಿಕೆಟ್ ಕಳೆದುಕೊಂಡರು. ಅಲ್ಲಿಗೆ ಭಾರತ ಕೇವಲ 77 ರನ್‌ಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಹಂತ ತಲುಪಿತು. ಈ ಸಮಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಕೆಟ್ ಬೀಳುವುದನ್ನು ನೋಡುತ್ತಿದ್ದ ನಾಯಕ ಸೂರ್ಯಕುಮಾರ್ ಯಾದವ್ ಅಂತಿಮ ಹಂತದವರೆಗೂ ಏಕಾಂಗಿ ಹೋರಾಟ ನಡೆಸಿದರು. ಸೂರ್ಯಗೆ ತುಸು ಕಾಲ ಜತೆಯಾದ ಅಕ್ಸರ್ ಪಟೇಲ್ 14 ರನ್ ಬಾರಿಸಿದರೆ, ಅರ್ಷ್‌ದೀಪ್ ಸಿಂಗ್ ಅಜೇಯ 4 ರನ್ ಗಳಿಸಿದರು. ಏಕಾಂಗಿಯಾಗಿ ಹೋರಾಡಿ ಭಾರತವನ್ನು ಭಾರೀ ಮುಖಭಂಗದಿಂದ ಪಾರು ಮಾಡಿದ ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ವರುಣ್ ಚಕ್ರವರ್ತಿ ಡಕ್‌ಔಟ್ ಆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮೆರಿಕಾ ಪರ ಶಾಡ್ಲಿ ವಾನ್ ಶಾಕ್‌ವಿಕ್ ನಾಲ್ಕು ವಿಕೆಟ್, ಹರ್ಮೀತ್ ಸಿಂಗ್ ಎರಡು ವಿಕೆಟ್, ಅಲಿ ಖಾನ್ ಹಾಗೂ ಮೊಹಮ್ಮದ್ ಮೊಹ್ಸಿನ್ ತಲಾ ಒಂದೊಂದು ವಿಕೆಟ್ ಪಡೆದರು.

ಯುಎಸ್ಎ ಇನ್ನಿಂಗ್ಸ್: ಬೌಲಿಂಗ್‌ನಲ್ಲಿ ಭಾರತಕ್ಕೆ ಅರ್ಧ ಇನ್ನಿಂಗ್ಸ್ ತಲೆ ನೋವಾಗಿದ್ದ ಅಮೆರಿಕಾ ಬ್ಯಾಟಿಂಗ್‌ನಲ್ಲಿ ಆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಲಿಲ್ಲ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಆಂಡ್ರಿಸ್ ಗೌಸ್ 6 ಹಾಗೂ ಸಾಯಿತೇಜಾ ಮುಕ್ಕಮಲ್ಲ 2 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಮೊನಾಂಕ್ ಪಟೇಲ್ ಡಕ್‌ಔಟ್ ಆದರು. ಈ ಮೂಲಕ ಕೇವಲ 13 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಅಮೆರಿಕಾ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಬಳಿಕ ಕಣಕ್ಕಿಳಿದ ಮಿಲಿಂದ್ ಕುಮಾರ್‌ 34, ಸಂಜಯ್ ಕೃಷ್ಣಮೂರ್ತಿ 37 ಹಾಗೂ ಶುಭಮ್ ರಂಜನೆ 37 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನತ್ತ ಕರೆದುಕೊಂಡು ಹೋಗಲಾಗಲೇ ಇಲ್ಲ. ಇನ್ನುಳಿದಂತೆ ಹರ್ಮೀತ್ ಸಿಂಗ್ ಡಕ್‌ಔಟ್, ಮೊಹಮ್ಮದ್ ಮೊಹ್ಸಿನ್ 8 ಹಾಗೂ ಶಾಡ್ಲಿ ವಾನ್ ಶಾಕ್‌ವಿಕ್ ಅಜೇಯ 2 ರನ್ ಗಳಿಸಿದರು.

ಭಾರತದ ಪರ ಮೊಹಮ್ಮದ್ ಸಿರಾಜ್ ಮೂರು ವಿಕೆಟ್, ಅರ್ಷ್‌ದೀಪ್ ಸಿಂಗ್ ಹಾಗೂ ಅಕ್ಸರ್ ಪಟೇಲ್ ತಲಾ ಎರಡು ವಿಕೆಟ್ ಮತ್ತು ವರುಣ್ ಚಕ್ರವರ್ತಿ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular