ಬೆಂಗಳೂರು: ಮಂಗಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗೆ ಕೊಲೆಗೈದ ಮೂವರು ಅಪರಾಧಿಗಳಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ದೃಢೀಕರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ಮತ್ತು ಶಿಕ್ಷೆ ರದ್ದು ಮಾಡುವಂತೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ(ಪೋಕ್ಸೊ) ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ದೃಢೀಕರಿಸಿದೆ. ಮಧ್ಯಪ್ರದೇಶದ ಜಯಬನ್ ಅಲಿಯಾಸ್ ಜಯಸಿಂಹ, ಮುಖೇಶ್ ಸಿಂಗ್, ಜಾರ್ಖಂಡ್ ನ ಮನೀಶ್ ಕೀರ್ತಿ ಕ್ರಿಮಿನಲ್ ಶಿಕ್ಷೆ ರದ್ದು ಕೋರಿ ಅರ್ಜಿ ಸಲ್ಲಿಸಿದ್ದು, ಇದನ್ನು ವಜಾಗೊಳಿಸಲಾಗಿದೆ. ಅಪರಾಧಿಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದರೆ ಅಂತಹ ದುಷ್ಕೃತ್ಯಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗುತ್ತದೆ. ಏಳು ವರ್ಷ ಏಳು ತಿಂಗಳ ಸಂತ್ರಸ್ತ ಬಾಲಕಿಗೆ ತಿಂಡಿ ಕೊಡಿಸುವ ನೆಪದಲ್ಲಿ ಕರೆದೊಯ್ದು ಅಪರಾಧಿಗಳು ಕಾಮತೃಷೆ ತೀರಿಸಿಕೊಂಡಿದ್ದಾರೆ. ಒಬ್ಬರ ಬಳಿಕ ಮತ್ತೊಬ್ಬರು ಅತ್ಯಾಚಾರ ಎಸಗಿ ಮೃತದೇಹವನ್ನು ಚರಂಡಿಗೆ ಎಸೆದಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ. ಈ ಘಟನೆ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದೆ ಎಂದು ಹೈಕೋರ್ಟ್ ಹೇಳಿದೆ.
ಮಂಗಳೂರಿನ ವಾಮಂಜೂರಿನ ಸಮೀಪ ಟೈಲ್ಸ್ ಕಾರ್ಖಾನೆ ಕಾರ್ಮಿಕರಾಗಿದ್ದ ಅಪರಾಧಿಗಳು ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪುತ್ರಿಯನ್ನು 2021ರ ನವೆಂಬರ್ 21ರಂದು ಚಿಕ್ಕಿ ಕೊಡಿಸುವುದಾಗಿ ತಮ್ಮ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗೆ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಸಾಕ್ಷ್ಯ ನಾಶ ಮಾಡಲು ಮೃತದೇಹವನ್ನು ಚರಂಡಿಗೆ ಎಸೆದಿದ್ದರು. ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ಜತೆಗೆ ತಲಾ 40 ಸಾವಿರ ರೂ. ದಂಡ ವಿಧಿಸಿತ್ತು.

