HomeKarnatakaರಾಜ್ಯದಲ್ಲಿ ಹೂಡಿಕೆ, ತಂತ್ರಜ್ಞಾನ, ಕೈಗಾರಿಕಾ ಸಹಕಾರ: ಸ್ವೀಡನ್, ಪೋಲೆಂಡ್ ಪ್ರತಿನಿಧಿಗಳೊಂದಿಗೆ ಮಹತ್ವದ ಚರ್ಚೆ

ರಾಜ್ಯದಲ್ಲಿ ಹೂಡಿಕೆ, ತಂತ್ರಜ್ಞಾನ, ಕೈಗಾರಿಕಾ ಸಹಕಾರ: ಸ್ವೀಡನ್, ಪೋಲೆಂಡ್ ಪ್ರತಿನಿಧಿಗಳೊಂದಿಗೆ ಮಹತ್ವದ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಹೂಡಿಕೆ, ತಂತ್ರಜ್ಞಾನ, ಕೈಗಾರಿಕಾ ಸಹಕಾರಕ್ಕೆ ಸಂಬಂಧಿಸಿದಂತೆ ಸ್ವೀಡನ್, ಪೋಲೆಂಡ್ ಪ್ರತಿನಿಧಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಭಾರತದಲ್ಲಿನ ಸ್ವೀಡನ್ ರಾಯಭಾರಿ ಪೆಟ್ರಾ ಮೆನಾಂಡರ್ ಅವರನ್ನು ಭೇಟಿ ಮಾಡಿ, ಕರ್ನಾಟಕ ಮತ್ತು ಸ್ವೀಡನ್ ನಡುವಿನ ಆರ್ಥಿಕ ಹಾಗೂ ನಾವೀನ್ಯತಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಚರ್ಚಿಸಿದ್ದಾರೆ.

ಭಾರತದಲ್ಲಿ ಸ್ವೀಡನ್‌ ನ ಒಟ್ಟು ಹೂಡಿಕೆಯ ಶೇ. 25ರಷ್ಟು ಕರ್ನಾಟಕದಲ್ಲಿದ್ದು, ಈಗಾಗಲೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವೀಡನ್‌ ನ ಶೇ. 61ರಷ್ಟು ಕಂಪನಿಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಆಸಕ್ತಿ ಹೊಂದಿವೆ ಎಂಬುದು ಸಂತಸದ ಸಂಗತಿ. ಜಾಗತಿಕ ಕಂಪನಿಗಳು ಕರ್ನಾಟಕದ ಉದ್ಯಮ ಇಕೋ ಸಿಸ್ಟಂ ಮೇಲಿಟ್ಟಿರುವ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಈಗಾಗಲೇ ಬಲವಾದ ಸ್ವೀಡಿಷ್ ಉದ್ಯಮಗಳ ಉಪಸ್ಥಿತಿಯಿದ್ದು, ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ಅತ್ಯಾಧುನಿಕ ಉತ್ಪಾದನೆ, ಸ್ವಚ್ಛ ಇಂಧನ ಹಾಗೂ ನವೋದ್ಯಮ ಕ್ಷೇತ್ರಗಳಲ್ಲಿ ಮತ್ತಷ್ಟು ಪಾಲುದಾರಿಕೆಗಳನ್ನು ಬೆಳೆಸುವ ಅವಕಾಶಗಳಿವೆ. ಐಟಿಬಿಟಿ ಇಲಾಖೆಯ ಜಾಗತಿಕ ನಾವೀನ್ಯತಾ ಒಕ್ಕೂಟ(GIA) ಕಾರ್ಯಕ್ರಮ ಹಾಗೂ ಬೆಂಗಳೂರು ಟೆಕ್ ಸಮ್ಮಿಟ್ 2026ರ ಮೂಲಕ ಈ ಸಹಕಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆ ಎಂದು ಖರ್ಗೆ ತಿಳಿಸಿದ್ದಾರೆ.

ಪೋಲೆಂಡ್ ಪ್ರಧಾನಿ ಭೇಟಿ

ಪೋಲೆಂಡ್ ಪ್ರಧಾನಮಂತ್ರಿ ಡೊನಾಲ್ಡ್ ಟಸ್ಕ್ ಹಾಗೂ ಅವರ ಉನ್ನತ ಮಟ್ಟದ ನಿಯೋಗವನ್ನು, ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಭೇಟಿಯಾದ ಪ್ರಿಯಾಂಕ್ ಖರ್ಗೆ ಕರ್ನಾಟಕ–ಪೋಲೆಂಡ್ ನಡುವಿನ ಹೂಡಿಕೆ, ತಂತ್ರಜ್ಞಾನ ಮತ್ತು ಕೈಗಾರಿಕಾ ಸಹಕಾರವನ್ನು ಬಲಪಡಿಸುವ ಕುರಿತು ಸಂಕ್ಷಿಪ್ತವಾಗಿ ಚರ್ಚೆ ನಡೆಸಿದೆ.

ಭಾರತ–ಪೋಲೆಂಡ್ ಉದ್ಯಮ ಸಭೆಯಲ್ಲಿ ಕರ್ನಾಟಕದ ತಂತ್ರಜ್ಞಾನ ಮತ್ತು ನಾವೀನ್ಯತಾ ಸಾಮರ್ಥ್ಯಗಳ ಕುರಿತು ಮಾತನಾಡಿದೆ. ಉತ್ಕೃಷ್ಟ ಮಾನವ ಸಂಪನ್ಮೂಲ, ಬಲಿಷ್ಠ ನವೋದ್ಯಮ ಇಕೋ ಸಿಸ್ಟಂ, ಜಿಸಿಸಿಗಳು ಹಾಗೂ ವಿಶ್ವದರ್ಜೆಯ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ರಾಜ್ಯದ ಪ್ರಮುಖ ಶಕ್ತಿಗಳಾಗಿವೆ.

ಕಳೆದ ವರ್ಷದ ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ ಪೋಲೆಂಡ್‌ ನ ಬಲಿಷ್ಠ ನಿಯೋಗ ಭಾಗವಹಿಸಿದ್ದು, ಕರ್ನಾಟಕ–ಕಟೊವಿಸ್ ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್ ಕಾರ್ಯಕ್ರಮವು ನಮ್ಮ ಸಹಕಾರಕ್ಕೆ ಮತ್ತಷ್ಟು ಬಲ ನೀಡಿದೆ. ಈ ಸಹಭಾಗಿತ್ವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕೌಶಲ್ಯ ಅಭಿವೃದ್ಧಿ ಕಾರಿಡಾರ್‌ ಗಳು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಸಹಕಾರ, ಜಂಟಿ ಬೌದ್ಧಿಕ ಆಸ್ತಿ ಸೃಷ್ಟಿ ಹಾಗೂ ಪರಸ್ಪರ ಮಾರುಕಟ್ಟೆ ಪ್ರವೇಶವನ್ನು ಬಲಪಡಿಸುವ ಕುರಿತು ಚರ್ಚಿಸಿದೆವು.

ಯುರೋಪಿನ ಪ್ರಮುಖ ಬೆಳವಣಿಗೆಯ ಯಶೋಗಾಥೆಗಳಲ್ಲಿ ಪೋಲೆಂಡ್ ಒಂದಾದರೆ, ಏಷ್ಯಾದ ಪ್ರಮುಖ ಬೆಳವಣಿಗೆಯ ಯಶೋಗಾಥೆಗಳಲ್ಲಿ ಕರ್ನಾಟಕವೂ ಒಂದಾಗಿದೆ. ವೇಗವಾಗಿ ಬೆಳೆಯುತ್ತಿರುವ ಈ ಎರಡು ನಾವೀನ್ಯತಾ ಇಕೋ ಸಿಸ್ಟಂಗಳ ನಡುವೆ ಇನ್ನಷ್ಟು ಬಲವಾದ ಮತ್ತು ದೀರ್ಘಕಾಲಿಕ ಪಾಲುದಾರಿಕೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಎದುರು ನೋಡುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular