ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ( ಫೆಬ್ರವರಿ 22 ) ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಮೂರನೇ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿ ಅಬ್ಬರಿಸಿತು.
ಗ್ರೂಪ್ ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಗೆದ್ದು ಬೀಗಿದ್ದ ಭಾರತ ಸೂಪರ್ 8ನ ಮೊದಲ ಪಂದ್ಯದಲ್ಲಿಯೇ ಮುಗ್ಗರಿಸಿತು. ನರೇಂದ್ರ ಮೋದಿ ಕ್ರೀಡಾಂಗಣದಂತಹ ಬ್ಯಾಟಿಂಗ್ ಪಿಚ್ ನಲ್ಲಿ ಭಾರತ 188 ರನ್ ಚೇಸ್ ಮಾಡಲಾಗದೇ ಭಾರಿ ಮುಖಭಂಗ ಅನುಭವಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆರಿಸಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 188 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ 18.4 ಓವರ್‌ಗಳಲ್ಲಿ 111 ರನ್ ಕಲೆಹಾಕಿ ಆಲ್‌ಔಟ್ ಆಯಿತು.
ಆರಂಭಿಕ ಆಘಾತ ಅನುಭವಿಸಿದ್ದ ದಕ್ಷಿಣ ಆಫ್ರಿಕಾಗೆ ಡಿವಾಲ್ಡ್ ಬ್ರೆವಿಸ್ ಹಾಗೂ ಡೇವಿಡ್ ಮಿಲ್ಲರ್ ಜೋಡಿ ಉತ್ತಮ ಜತೆಯಾಟವಾಡುವ ಮೂಲಕ ಆಸೆರೆಯಾಯಿತು. ಭಾರತವೂ ಸಹ ಅದೇ ರೀತಿ ಬೇಗನೆ ತನ್ನ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ಮಿಲ್ಲರ್ ಹಾಗೂ ಬ್ರೆವಿಸ್ ಮಾಡಿದ ಕಾರ್ಯವನ್ನು ಭಾರತ ತಂಡದಲ್ಲಿ ಮಾಡಲು ಯಾರೂ ಇರಲಿಲ್ಲ. ಟಾಪ್ ಆರ್ಡರ್ ಹಾಗೂ ನಂತರ ಕಣಕ್ಕಿಳಿದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿ ವಿಫಲರಾದರು.
ಹೀಗೆ ಭಾರತ ಹೀನಾಯ ಸೋಲು ಅನುಭವಿಸುತ್ತಿದ್ದಂತೆ ಪಂದ್ಯ ಆರಂಭಕ್ಕೂ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಬದಲಾವಣೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸುವಾಗ ನೀಡಿದ ಹೇಳಿಕೆ ವೈರಲಾಗಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ನೀಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಸೂರ್ಯಕುಮಾರ್ ಯಾದವ್ ‘ಸಂಜು ಸ್ಯಾಮ್ಸನ್ ಆಡಿಸಲು ಅಭಿಷೇಕ್ ಶರ್ಮರನ್ನು ಕೂರಿಸಬೇಕ? ತಿಲಕ್ ವರ್ಮಾ ಅವರನ್ನು ಕೈಬಿಡಬೇಕಾ?’ ಎಂದು ಮೂದಲಿಕೆ ನಗೆ ಬೀರಿದ್ದರು.
ಆದರೆ ಪಂದ್ಯದಲ್ಲಿ ಈ ಇಬ್ಬರೂ ಮಕಾಡೆ ಮಲಗಿದ್ದಾರೆ. ಅಭಿಷೇಕ್ ಶರ್ಮಾ ಪರದಾಡಿ 15 ರನ್ ಗಳಿಸಿ ಔಟ್ ಆದರೆ, ತಿಲಕ್ ವರ್ಮಾ ಕೇವಲ 1 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಅತಿಯಾದ ವಿಶ್ವಾಸ ವ್ಯಕ್ತಪಡಿಸಿದ್ದ ಸೂರ್ಯಕುಮಾರ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳಿಗೆ ಗುರಿಯಾಗಿ ಮುಖಭಂಗಕ್ಕೊಳಗಾಗಿದ್ದಾರೆ.

