ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8ರಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಪಾಕಿಸ್ತಾನ 213 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿದೆ.
ಈ ಪಂದ್ಯದ ಫಲಿತಾಂಶ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯವನ್ನು ನಿರ್ಧರಿಸಲಿದ್ದು, ಪಾಕ್‌ಗೆ ಮಹತ್ವದ್ದಾಗಿದೆ. 213 ರನ್‌ಗಳ ಗುರಿ ನೀಡಿರುವ ಪಾಕ್ ಪಂದ್ಯದಲ್ಲಿ ಕೇವಲ ಗೆಲುವು ಸಾಧಿಸಿದರೆ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದಿಲ್ಲ. ನ್ಯೂಜಿಲೆಂಡ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್‌ರೇಟ್ ಗಳಿಸಿದರೆ ಮಾತ್ರ ಅರ್ಹತೆ ಸಿಗಲಿದೆ. ಇದಕ್ಕಾಗಿ ಪಾಕಿಸ್ತಾನ ಶ್ರೀಲಂಕಾವನ್ನು ಕಡ್ಡಾಯವಾಗಿ 147 ರನ್ ಅಥವಾ ಅದಕ್ಕಿಂತ ಕಡಿಮೆಗೆ ಕಟ್ಟಿಹಾಕಬೇಕು. ಶ್ರೀಲಂಕಾ 148 ರನ್ ದಾಟಿದರೆ ನ್ಯೂಜಿಲೆಂಡ್ ಸೆಮಿಫೈನಲ್ ತಲುಪಲಿದ್ದು, ಪಾಕ್ ಟೂರ್ನಿಯಿಂದ ಹೊರಬೀಳಲಿದೆ.
ಪಾಕಿಸ್ತಾನದ ಪರ ಆರಂಭಿಕರಾಗಿ ಕಣಕ್ಕಿಳಿದ ಸಹಿಬ್ಜಾದಾ ಫರ್ಹಾನ್ ಹಾಗೂ ಫಖರ್ ಜಮಾನ್ 15.5 ಓವರ್‌ಗಳಲ್ಲಿ ಬರೋಬ್ಬರಿ 176 ರನ್‌ಗಳ ಜತೆಯಾಟವನ್ನಾಡಿದರು. ಇದು ಟಿ ಟ್ವೆಂಟಿ ವಿಶ್ವಕಪ್‌ನಲ್ಲೇ ದಾಖಲಾದ ಅತಿದೊಡ್ಡ ಜತೆಯಾಟ ಎಂಬ ದಾಖಲೆ ಇದು. ಫರ್ಹಾನ್ 60 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 100 ರನ್ ಬಾರಿಸಿದರೆ, ಫಖರ್ ಜಮಾನ್ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಇವರ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ಎಲ್ಲ ಆಟಗಾರರು ಸಹ ಒಂದಂಕಿಗೆ ವಿಕೆಟ್ ಒಪ್ಪಿಸಿ ಕಟ್ಟಿದ್ದ ಬೃಹತ್ ಇನ್ನಿಂಗ್ಸ್ ಮುಂದುವರಿಸುವಲ್ಲಿ ವಿಫಲರಾದರು. ಖವಾಜಾ ನಫೆ 2, ಶದಬ್ ಖಾನ್ 7, ಮೊಹಮ್ಮದ್ ನವಾಜ್ ಡಕ್‌ಔಟ್, ಸಲ್ಮಾನ್ ಅಲಿ ಆಘಾ ಡಕ್‌ಔಟ್, ಶಾಹೀನ್ ಅಫ್ರಿದಿ 4, ನಸೀಮ್ ಶಾ 1, ಉಸ್ಮಾನ್ ಖಾನ್ ಅಜೇಯ 8 ಹಾಗೂ ಅಬ್ರಾರ್ ಅಹ್ಮದ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಶ್ರೀಲಂಕಾ ಪರ ದಿಲ್‌ಶನ್ ಮಧುಶಂಕ ಮೂರು ವಿಕೆಟ್, ದಸುನ್ ಶನಕ ಎರಡು ವಿಕೆಟ್ ಹಾಗೂ ದುಷ್ಮಂತ ಚಮೀರ ಒಂದು ವಿಕೆಟ್ ಪಡೆದರು.

