ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಇಂದು ( ಫೆಬ್ರವರಿ 25 ) ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡಿದ್ದು, ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿ ಶ್ರೀಲಂಕಾಗೆ 169 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿದೆ. ಈ ಮೊತ್ತವನ್ನು ಶ್ರೀಲಂಕಾ ಚೇಸ್ ಮಾಡದಿದ್ದರೆ ಸೂಪರ್ 8 ಸುತ್ತಿನಲ್ಲಿ ಎರಡನೇ ಸೋಲನ್ನು ಅನುಭವಿಸಲಿದ್ದು, ಟೂರ್ನಿಯಿಂದ ಹೊರಬೀಳಲಿದೆ.
ನ್ಯೂಜಿಲೆಂಡ್ 34 ರನ್‌ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಫಿನ್ ಅಲೆನ್ 23 ರನ್ ಕಲೆಹಾಕಿದರೆ, ಟಿಮ್ ಸೈಫರ್ಟ್ 8 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ 32 ರನ್ ಬಾರಿಸಿದರೆ, ಮತ್ತೊಂದೆಡೆ ಗ್ಲೆನ್ ಫಿಲಿಪ್ಸ್ 18, ಡ್ಯಾರಿಲ್ ಮಿಚೆಲ್ 3, ಮಾರ್ಕ್ ಚಾಂಪ್‌ಮನ್ ಡಕ್‌ಔಟ್ ಆದರು. ಅಲ್ಲಿಗೆ ಕಿವೀಸ್ 84 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಮಯದಲ್ಲಿ ಏಳನೇ ವಿಕೆಟ್‌ಗೆ ಜತೆಯಾದ ನಾಯಕ ಮಿಚೆಲ್ ಸ್ಯಾಂಟ್ನರ್ ಹಾಗೂ ಕೋಲ್ ಮೆಕ್‌ಕೋನ್ಷಿ 84 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಸುಧಾರಣೆ ತಂದರು. ಸ್ಯಾಂಟ್ನರ್ 26 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಬಾರಿಸಿದರೆ, ಮೆಕ್‌ಕೋನ್ಷಿ 23 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರು.
ಶ್ರೀಲಂಕಾ ಪರ ಮಹೀಶ್ ತೀಕ್ಷಣ ಹಾಗೂ ದುಷ್ಮಂತ ಚಮೀರ ತಲಾ ಮೂರು ವಿಕೆಟ್ ಪಡೆದರೆ, ದುನಿತ್ ವೆಲ್ಲಲಾಗೆ ಒಂದು ವಿಕೆಟ್ ಪಡೆದರು.

