ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಇಂದು ( ಫೆಬ್ರವರಿ 25 ) ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡಿದ್ದು, ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಇನ್ನು ಈ ಪಂದ್ಯ ಎರಡೂ ತಂಡಗಳಿಗೂ ಬಹು ಮುಖ್ಯದ್ದಾಗಿದ್ದು, ಒಂದುವೇಳೆ ಶ್ರೀಲಂಕಾ ತಂಡವೇನಾದರೂ ಸೋತರೆ ಸೂಪರ್ 8ರಲ್ಲಿ ಎರಡು ಪಂದ್ಯಗಳನ್ನು ಸೋತಂತಾಗಲಿದ್ದು, ಟೂರ್ನಿಯಿಂದ ಎಲಿಮಿನೇಟ್ ಆಗಿ ಹೊರಬೀಳಲಿದೆ.
ಈ ಪಂದ್ಯ ಉಭಯ ತಂಡಗಳ ಸೆಮಿಫೈನಲ್ ಭವಿಷ್ಯವನ್ನು ಮಾತ್ರವಲ್ಲದೇ ಪಾಕಿಸ್ತಾನ ತಂಡದ ಸೆಮಿಫೈನಲ್ ಪ್ರವೇಶದ ಅವಕಾಶದ ಮೇಲೆ ದೊಡ್ಡ ಪ್ರಭಾವ ಬೀರಲಿದೆ. ಹೌದು, ಗ್ರೂಪ್ 2ರಲ್ಲಿ ಇಂಗ್ಲೆಂಡ್ ತಂಡ ಈಗಾಗಲೇ ಸೆಮಿಫೈನಲ್ ತಲುಪಿದ್ದು, ಲಂಕಾ, ನ್ಯೂಜಿಲೆಂಡ್ ಹಾಗೂ ಪಾಕ್ ಈ ಮೂರು ತಂಡಗಳಲ್ಲಿ ಒಬ್ಬರಿಗೆ ಮಾತ್ರ ಉಳಿದೊಂದು ಸ್ಥಾನ ಸಿಗಲಿದೆ.
ಈ ಹಿಂದೆ ನಡೆದ ಪಾಕ್ ಹಾಗೂ ನ್ಯೂಜಿಲೆಂಡ್ ತಂಡಗಳ ಪಂದ್ಯ ಡ್ರಾ ಆದ ಕಾರಣ ಎರಡೂ ತಂಡಗಳು ತಲಾ ಒಂದೊಂದು ಅಂಕ ಹೊಂದಿರುವ ಕಾರಣ ಇಂದಿನ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಕಿವೀಸ್ ಗೆಲ್ಲುವುದಕ್ಕಿಂತ ಲಂಕಾ ಗೆದ್ದರೆ ಅನುಕೂಲ ಹೆಚ್ಚು.
ಏಕೆಂದರೆ ಪಾಕ್‌ಗೆ ಇನ್ನೊಂದು ಪಂದ್ಯ ಮಾತ್ರ ಉಳಿದಿದೆ ಅದೂ ಸಹ ಲಂಕಾ ವಿರುದ್ಧ. ಹೀಗಾಗಿ ಇಂದಿನ ಪಂದ್ಯದಲ್ಲಿ ಲಂಕಾ ಗೆದ್ದು, ಪಾಕ್ ತನ್ನ ಮುಂದಿನ ಪಂದ್ಯದಲ್ಲಿ ಲಂಕಾ ವಿರುದ್ಧ ಗೆದ್ದರೆ ಸೆಮೀಸ್ ಆಸೆ ಜೀವಂತವಾಗಿರಲಿದೆ.
ಅಷ್ಟು ಮಾತ್ರವಲ್ಲದೇ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಲಂಕಾ ವಿರುದ್ಧ ಕಿವೀಸ್ ಸೋತು, ಇಂಗ್ಲೆಂಡ್ ವಿರುದ್ಧವೂ ಸೋತರೆ, ಪಾಕ್ ಲಂಕಾ ವಿರುದ್ಧ ಕಡ್ಡಾಯವಾಗಿ ಗೆದ್ದರೆ ಅಲ್ಲಿಗೆ ಪಾಕ್ ಸೆಮಿಫೈನಲ್ ಪ್ರವೇಶ ಪಕ್ಕಾ.
ಒಂದುವೇಳೆ ಲಂಕಾ ವಿರುದ್ಧ ನ್ಯೂಜಿಲೆಂಡ್ ಸೋತು ಇಂಗ್ಲೆಂಡ್ ವಿರುದ್ಧ ಗೆದ್ದರೆ, ಅತ್ತ ಲಂಕಾ ವಿರುದ್ಧ ಪಾಕ್ ಗೆದ್ದರೆ ಕಿವೀಸ್ ಹಾಗೂ ಪಾಕ್ ತಲಾ 3 ಅಂಕಗಳನ್ನು ಹೊಂದಲಿದ್ದು, ಆಗ ನೆಟ್ ರನ್‌ರೇಟ್ ಆಧಾರದ ಮೇಲೆ ಸೆಮೀಸ್ ನಿರ್ಧಾರವಾಗಲಿದೆ.
ಒಟ್ಟಿನಲ್ಲಿ ಪಾಕ್ ಪಾಲಿಗೆ ಪಂದ್ಯಗಳ ಫಲಿತಾಂಶ ಈ ಕೆಳಗಿನಂತೆ ಬಂದರೆ ಸೆಮಿಫೈನಲ್ ಪ್ರವೇಶಿಸಲಿದೆ.
ಹಾದಿ 1:
ನ್ಯೂಜಿಲೆಂಡ್ vs ಶ್ರೀಲಂಕಾ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲಬೇಕು
ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಬೇಕು
ಪಾಕಿಸ್ತಾನ vs ಶ್ರೀಲಂಕಾ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಬೇಕು
ಈ ರೀತಿ ನಡೆದರೆ ಇಂಗ್ಲೆಂಡ್ 6 ಅಂಕ, ಪಾಕಿಸ್ತಾನ 3 ಅಂಕ, ಶ್ರೀಲಂಕಾ 2 ಅಂಕ ಹಾಗೂ ನ್ಯೂಜಿಲೆಂಡ್ 1 ಅಂಕ
ಹಾದಿ 2:
ನ್ಯೂಜಿಲೆಂಡ್ vs ಶ್ರೀಲಂಕಾ ಪಂದ್ಯದಲ್ಲಿ ಲಂಕಾ ಗೆದ್ದರೆ
ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ
ಪಾಕಿಸ್ತಾನ vs ಶ್ರೀಲಂಕಾ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ
ಇಂಗ್ಲೆಂಡ್ 4 ಅಂಕ, ನ್ಯೂಜಿಲೆಂಡ್ 3 ಅಂಕ, ಪಾಕಿಸ್ತಾನ 3 ಅಂಕ ಹಾಗೂ ಶ್ರೀಲಂಕಾ 2 ಅಂಕ ( ನೆಟ್ ರನ್‌ರೇಟ್ ಮೇಲೆ ಪಾಕ್ ಅಥವಾ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶ ನಿರ್ಧಾರ )
ಪಾಕ್ ಎಲಿಮಿನೇಷನ್:
ನ್ಯೂಜಿಲೆಂಡ್ vs ಶ್ರೀಲಂಕಾ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ
ಇಂಗ್ಲೆಂಡ್ vs ನ್ಯೂಜಿಲೆಂಡ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ
ಪಾಕಿಸ್ತಾನ vs ಶ್ರೀಲಂಕಾ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೂ, ಲಂಕಾ ಗೆದ್ದರೂ ಪಾಕಿಸ್ತಾನ ಔಟ್

