ಇಂದು ( ಫೆಬ್ರವರಿ 15 ) ಕೊಲಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯ ನಡೆಯುತ್ತಿದೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಫೀಲ್ಡಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಹೀಗೆ ಟಾಸ್ ಗೆದ್ದ ನಂತರ ತಮ್ಮ ಆಯ್ಕೆ ತಿಳಿಸಿ, ಪಿಚ್ ಹಾಗೂ ತಂಡದ ಬಗ್ಗೆ ಮಾತನಾಡಿದ ಸಲ್ಮಾನ್ ತಮ್ಮ ಮಾತು ಮುಗಿದ ಬಳಿಕ ತೆರಳಿದರು. ಈ ವೇಳೆ ಸೂರ್ಯಕುಮಾರ್ ಯಾದವ್ ತಮ್ಮ ಅಭಿಪ್ರಾಯ ತಿಳಿಸಲು ಬಂದಾಗ ಸಲ್ಮಾನ್ ಮುಖಾಮುಖಿಯಾದರೂ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡದೇ ತೆರಳಿದ್ದಾರೆ.
ಈ ಮೂಲಕ ಏಷ್ಯಾ ಕಪ್ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ನಡೆ ಈ ಬಾರಿಯ ವಿಶ್ವಕಪ್ನಲ್ಲೂ ಮುಂದುವರಿದಿದೆ. ಹೀಗೆ ಟಾಸ್ ಸಂದರ್ಭದಲ್ಲಿ ಕೈಲುಕುದ ಆಟಗಾರರು ಪಂದ್ಯದ ಫಲಿತಾಂಶದ ಬಳಿಕ ಹಸ್ತಲಾಘವ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಭಾರತದ ಆಡುವ ಬಳಗ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನ ಆಡುವ ಬಳಗ: ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಘಾ (ನಾಯಕ), ಬಾಬರ್ ಅಜಮ್, ಮೊಹಮ್ಮದ್ ನವಾಜ್, ಶದಾಬ್ ಖಾನ್, ಫಹೀಮ್ ಅಶ್ರಫ್, ಉಸ್ಮಾನ್ ಖಾನ್ (ವಿಕೆಟ್ಕೀಪರ್), ಶಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.

