ಇಂದು ( ಫೆಬ್ರವರಿ 15 ) ಕೊಲಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಫೀಲ್ಡಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.
ಟಾಸ್ ಬಳಿಕ ತಂಡದ ಆಡುವ ಬಳಗದ ಕುರಿತು ಮಾತನಾಡಿದ ಪಾಕ್ ನಾಯಕ ತಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದರೆ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಎರಡು ಬದಲಾವಣೆಗಳಾಗಿವೆ ಎಂದಿದ್ದಾರೆ.
ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ತಂಡದಿಂದ ಹೊರಬಿದ್ದಿದ್ದು, ಹೊಟ್ಟೆ ನೋವಿನಿಂದ ಚೇತರಿಸಿಕೊಂಡಿರುವ ಅಭಿಷೇಕ್ ಶರ್ಮಾ ತಂಡಕ್ಕೆ ವಾಪಸ್ಸಾಗಿದ್ದಾರೆ. ಜತೆಗೆ ಕೊಲಂಬೊ ಪಿಚ್ ಹಾಗೂ ಪಾಕಿಸ್ತಾನ ತಂಡಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು, ಅರ್ಷ್ದೀಪ್ ಸಿಂಗ್ ಬದಲಿಗೆ ಕುಲ್ದೀಪ್ ಯಾದವ್ ತಂಡ ಸೇರಿದ್ದಾರೆ.
ಈ ಮೂಲಕ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಆಲ್ರೌಂಡರ್ಗಳನ್ನು ಹೊರತುಪಡಿಸಿ ಜಸ್ಪ್ರೀತ್ ಬುಮ್ರಾ ಏಕೈಕ ವೇಗಿಯಾಗಿದ್ದು, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್ ವರುಣ್ ಚಕ್ರವರ್ತಿ ಸೇರಿ ಮೂವರು ಸ್ಪಿನ್ನರ್ಗಳಿದ್ದಾರೆ.
ಭಾರತದ ಆಡುವ ಬಳಗ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನ ಆಡುವ ಬಳಗ: ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಘಾ (ನಾಯಕ), ಬಾಬರ್ ಅಜಮ್, ಮೊಹಮ್ಮದ್ ನವಾಜ್, ಶದಾಬ್ ಖಾನ್, ಫಹೀಮ್ ಅಶ್ರಫ್, ಉಸ್ಮಾನ್ ಖಾನ್ (ವಿಕೆಟ್ಕೀಪರ್), ಶಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.

